ರಾಷ್ಟ್ರೀಯ ಪಕ್ಷಗಳಿಗೆ ಟಾಂಗ್ ಕೊಟ್ಟ ಜೆಡಿಎಸ್ ಶಾಸಕ ಮಧು ಬಂಗಾರಪ್ಪ

ನನ್ನ ತಂದೆ ಎಸ್.ಬಂಗಾರಪ್ಪರ ಸಿದ್ಧಾಂತ-ಆದರ್ಶಗಳನ್ನಿಟ್ಟುಕೊಂಡೇ ಮುನ್ನಡೆಯುತ್ತಿದ್ದೇನೆ ಎಂದು ಜೆಡಿಎಸ್ ಶಾಸಕ ಮಧು ಬಂಗಾರಪ್ಪ ಹೇಳಿದರು.
ಪ್ರೆಸ್‍ಟ್ರಸ್ಟ್ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಂದೆ ಭೌತಿಕವಾಗಿ ಇಲ್ಲದಿದ್ದರೂ ಅವರ ಸಿದ್ಧಾಂತಗಳು ನನ್ನಲ್ಲಿವೆ. ನಾನು ಅತ್ಯಂತ ಸಂತೋಷದಿಂದ ರಾಜಕಾರಣ ಮಾಡುತ್ತಿರುವೆ. ಸೌಹಾರ್ದತೆ ನನ್ನ ಕ್ಷೇತ್ರದಲ್ಲಿದೆ. ಇತರ ಕಡೆಗಳಲ್ಲಿ ಆಗುವಂತೆ ಕೋಮುಗಲಭೆ ನಮ್ಮಲ್ಲಿಲ್ಲ. ಸೋತಾಗಲೂ ಸೊರಬದ ಜನತೆ ನಮ್ಮೊಂದಿಗಿದ್ದಾರೆ. ಗೆದ್ದಾಗಲೂ ಇದ್ದಾರೆ. ತಂದೆಯವರ ಹಾದಿಯಲ್ಲೇ ನಾನು ಸಾಗುತ್ತಿದ್ದೇನೆ ಎಂದು ಹೇಳಿದರು.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಿಂದ ಸಮಾನಾಂತರ ದೂರ ಕಾಯ್ದುಕೊಂಡಿದ್ದೇನೆ. ಈ ಎರಡೂ ಪಕ್ಷಗಳು ಜನರನ್ನು ಮೋಸಗೊಳಿಸುತ್ತಿವೆ. ಬಿಜೆಪಿ ಈಗ ಹತಾಶವಾಗಿ ಕೋಮುತನವನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೊರಟಿದೆ. ಕಾಂಗ್ರೆಸ್ ಸರ್ಕಾರ ಕೂಡ ಆಮಿಷಗಳ ಮೇಲೆ ರಾಜಕಾರಣ ಮಾಡುತ್ತಿದೆ.
ಈ ಎರಡೂ ಪಕ್ಷಗಳಿಗಿಂತ ಭಿನ್ನವಾಗಿ ಮತ್ತು ಪ್ರಾಮಾಣಿಕವಾಗಿ ಜೆಡಿಎಸ್ ಕೆಲಸ ಮಾಡುತ್ತಿದೆ. ಇಷ್ಟಾದರೂ ಈ ಎರಡೂ ಪಕ್ಷಗಳು ಜೆಡಿಎಸ್‍ನ್ನು ಜೋಕರ್ ಸ್ಥಾನಕ್ಕೆ ನಿಲ್ಲಿಸಿವೆ. ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಎಂಬ ಈ ಜೋಕರ್ ಏನು ಮಾಡುತ್ತದೆ ಎಂದು ತೋರಿಸುತ್ತದೆ ಎಂದು ಎರಡೂ ಪಕ್ಷಗಳಿಗೂ ಟಾಂಗ್ ನೀಡಿದರು.ರಾಜ್ಯ ಸರ್ಕಾರ ಅನುದಾನ ನೀಡದೇ ಉದ್ರಿ ಹೇಳುತ್ತಿದೆ. ಕಾಗೋಡು ತಿಮ್ಮಪ್ಪನವರ ಸಹಾಯದಿಂದ ನನ್ನ ಕ್ಷೇತ್ರದಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದು ಅನುದಾನವನ್ನು ಸಂಪೂರ್ಣವಾಗಿ ಉಪಯೋಗಿಸಿದ್ದೇನೆ ಎಂದರು.
Comments