ಸಿಎಂ ಸಿದ್ದರಾಮಯ್ಯನವರಿಗೆ ಶೋಭಾ ಕರಂದ್ಲಾಜೆ ಸವಾಲು
ಬಿಜೆಪಿಯವರು ಭಯೋತ್ಪಾದಕರು, ಸಮಾಜದಲ್ಲಿ ವಿಷಬೀಜ ಬಿತ್ತುವವರು , ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗವಹಿಸಿರುವವರು ಎಂಬುದಾದರೆ ಏಕೆ ನಮ್ಮನ್ನು ಬಂಧಿಸಿಲ್ಲ. ತಾಕತ್ತಿದ್ದರೆ ನಮ್ಮನ್ನು ಬಂಧಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶೋಭಾ ಕರಂದ್ಲಾಜೆ ಸವಾಲು ಹಾಕಿದರು.
ನಗರದ ಕಾಂಗ್ರೆಸ್ ಕಚೇರಿ ಬಳಿ ಪ್ರತಿಭಟನೆ ಮುನ್ನ ಮಾತನಾಡಿದ ಅವರು, ಕಳೆದ ಮೂರು ದಿನಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿಯವರು ಭಯೋತ್ಪಾದಕರು ಎಂದು ಮನಸೋ ಇಚ್ಚೆ ಮಾತನಾಡುತ್ತಿದ್ದಾರೆ. ತಾನೊಬ್ಬ ಮುಖ್ಯಮಂತ್ರಿ ಎಂಬುದನ್ನು ಮರೆತು ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೆಲ್ಲ ರಾಜ್ಯದ ಆರೂವರೆ ಕೋಟಿ ಜನ ಗಮನಿಸುತ್ತಿದ್ದಾರೆ. ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಿಎಂ ವಿರುದ್ದ ಹರಿಹಾಯ್ದರು.
ಮಂಗಳೂರು, ಶಿವಮೊಗ್ಗ, ಮೈಸೂರು ಹೀಗೆ ಹೋದೆಡೆಯಲ್ಲೆಲ್ಲ ಸಿದ್ದರಾಮಯ್ಯ, ಬಿಜೆಪಿಯವರು ಉಗ್ರಗಾಮಿಗಳು ಎಂದು ಪದೇ ಪದೇ ಹೇಳುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ರಾಜ್ಯದಲ್ಲಿ ಅವರಿಗೆ ಉಳಿಗಾಲವಿಲ್ಲ. ರಾಜ್ಯದಲ್ಲಿ 24ಕ್ಕೂ ಹೆಚ್ಚು ಹಿಂದು ಯುವಕರ ಹತ್ಯೆಯಾಗಿದ್ದು , ಅವರ ಕುಟುಂಬದ ರೋಧನೆ ಅರ್ಥವಾಗುತ್ತಿಲ್ಲವೇ ಪುತ್ರನ ಕಳೆದುಕೊಂಡ ಸಂಕಟ ನಿಮಗೆ ತಿಳಿದಿಲ್ಲವೆ ಎಂದು ಪ್ರಶ್ನಿಸಿದರು. ನಾವು ಭಯೋತ್ಪಾದಕರು ಎಂದೆನಿಸಿದರೆ ನಮ್ಮನ್ನು ಬಂಧಿಸಿ ಎಂದು ಶೋಭಾ ಕರಂದ್ಲಾಜೆ ನೇರ ಸವಾಲೆಸೆದರು.
Comments