ತೆರಿಗೆ ದುಡ್ಡನ್ನು ಬಳಸಿಕೊಂಡು ಸಿಎಂ ಸಾಧನಾ ಸಮಾವೇಶ ಮಾಡ್ತಿದಾರೆ : ಎಚ್ ಡಿಡಿ

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಂಡು ಸಾಧನಾ ಸಮಾವೇಶ ಮಾಡಿ ಜನರ ತೆರಿಗೆಯನ್ನು ವೆಚ್ಚ ಮಾಡುತ್ತಿದೆ. ಅಲ್ಲದೇ, ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂದು ದುರಹಂಕಾರದ ಮಾತುಗಳನ್ನು ಕಾಂಗ್ರೆಸ್ ನಾಯಕರು ಆಡುತ್ತಿದ್ದಾರೆಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತೀವ್ರ ವಾಗ್ಧಾಳಿ ನಡೆಸಿದರು.
ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ರಾಜ್ಯ ಪ್ರವಾಸ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ 4.5 ವರ್ಷಗಳಿಂದ ಯಾವುದೇ ಸಾಧನೆ ಮಾಡಿಲ್ಲ. ಚುನಾವಣೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಸಾವಿರಾರು ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮಾಡುತ್ತಿದ್ದಾರೆ. ಇದು ಪ್ರಚಾರಕ್ಕೇ ಹೊರತು ರಾಜ್ಯದ ಅಭಿವೃದ್ಧಿಗಾಗಿ ಅಲ್ಲ ಎಂಬುದನ್ನು ಜನರು ಅರಿಯಬೇಕು ಎಂದರು.
ಸಿಎಂ ದುರಹಂಕಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್ ಪಕ್ಷವನ್ನು ಮುಗಿಸುವ ದುರಹಂಕಾರದ ಮಾತನಾಡುತ್ತಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬಂದು ನಾನೇ ಮುಖ್ಯಮಂತ್ರಿ ಆಗುವುದಾಗಿ ಹೇಳುತ್ತಿದ್ದಾರೆ. ದೇವೇಗೌಡರು ಇಳಿ ವಯಸ್ಸಿನಲ್ಲೂ ರಾಜ್ಯ ಸುತ್ತಾಡಿ ಮಗನನ್ನು ಮುಖ್ಯಮಂತ್ರಿ ಮಾಡಲು ಹೋರಾಡುತ್ತಿದ್ದಾರೆಂದು ಟೀಕಿಸುತ್ತಾರೆ. ಆದರೆ, ತಮ್ಮ ಮಗ ಸಾವನ್ನಪ್ಪಿದ 8 ದಿನಗಳಲ್ಲಿ ಮತ್ತೂಬ್ಬ ಮಗನನ್ನು ತಮ್ಮ ಕ್ಷೇತ್ರದ ಉಸ್ತುವಾರಿ ನೋಡಲು ನೇಮಕ ಮಾಡಿದ್ದು ಸರಿಯೇ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನ ಹಣ, ಅಧಿಕಾರದ ದರ್ಪವನ್ನು ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಜೆಡಿಎಸ್ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವುದನ್ನು ಬಿಡಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಾಂಗೀಯ ಘರ್ಷಣೆ ನಡೆದು
ಸುಮಾರು 20 ಅಮಾಯಕರು ಸಾವಿಗೀಡಾಗಿದ್ದಾರೆ. ಈ ಕುರಿತು ಯಾವುದೇ ಕ್ರಮ ಕೈಗೊಳ್ಳದೇ ಮೌನವಾಗಿದ್ದೀರಿ. ಇದೇ ನಿಮ್ಮ ಸಾಧನೆಯೇ ಎಂದು ಪ್ರಶ್ನಿಸಿದರು.
Comments