ಕರ್ನಾಟಕ ಚುನಾವಣೆಗೆ ಮೋದಿ ಗೇಮ್ ಪ್ಲಾನ್ ಶುರು

ಕಾಂಗ್ರೆಸ್‍ನ ಭದ್ರಕೋಟೆಯಂತಿರುವ ಕರ್ನಾಟಕ ರಾಜ್ಯದಲ್ಲಿ ಶತಾಯಗತಾಯ ಗೆಲುವು ಸಾಧಿಸಬೇಕೆಂಬ ಶಪಥ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿಂದು ಚುನಾವಣೆ ಕಾರ್ಯತಂತ್ರಗಳ ಕುರಿತು ಬಿಜೆಪಿ ವರಿಷ್ಠರೊಂದಿಗೆ ಮಹತ್ವದ ಸಮಾಲೋಚನೆ ನಡೆಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ವರಿಷ್ಠರು ಪಾಲ್ಗೊಂಡಿದ್ದ ಸಭೆಯಲ್ಲಿ ಕರ್ನಾಟಕದ ವಿಧಾನಸಭಾ ಚುನಾವಣೆ ಸಿದ್ದತೆ ಮತ್ತು ಗೆಲುವಿಗೆ ಕೈಗೊಳ್ಳಬಹುದಾದ ಕಾರ್ಯತಂತ್ರಗಳ ಕುರಿತು ಸಭೆಯಲ್ಲಿ ಮೋದಿ ಚರ್ಚಿಸಿದರು. ಈ ಸಂದರ್ಭದಲ್ಲಿ ಅವರು ಪಕ್ಷದ ಹಿರಿಯರಿಂದ ಕೆಲವು ಮಹತ್ವದ ಸಲಹೆ ಮತ್ತು ಅಭಿಪ್ರಾಯಗಳನ್ನು ಸಂಗ್ರಹಿಸಿದರು. ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯು ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪ್ರತಿಷ್ಠೆಯ ಕಣವಾಗಿದ್ದು , ಇಂದಿನ ಬಿಜೆಪಿ ಈ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ. ರಾಜ್ಯ ಚುನಾವಣೆಯೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಕಾರ್ಯಕರ್ತರ ಕೊಲೆ ಮತ್ತು ಹಿಂಸಾಚಾರ ಘಟನೆಗಳ ಬಗ್ಗೆ ಮೋದಿ ರಾಜ್ಯದ ವರಿಷ್ಠರಿಂದ ಮಾಹಿತಿ ಪಡೆದುಕೊಂಡರೆಂದು ಉನ್ನತ ಮೂಲಗಳು ತಿಳಿಸಿದೆ. ಕರ್ನಾಟಕ ಸೇರಿದಂತೆ ಎಂಟು ರಾಜ್ಯಗಳಿಗೆ ಈ ವರ್ಷವೇ ವಿಧಾನಸಭೆ ಚುನಾವಣೆಗಳು ನಡೆಯಲಿದ್ದು, ಆ ಬಗ್ಗೆಯೂ ಕೂಡ ಪ್ರಧಾನಿ ಸಮಾಲೋಚನೆ ನಡೆಸಿದರು ಎನ್ನಲಾಗಿದೆ. ದೇಶದಲ್ಲಿ ನಡೆಯುತ್ತಿರುವ ಪ್ರಸಕ್ತ ರಾಜಕೀಯ ವಿದ್ಯಾಮಾನಗಳು, ಕೇಂದ್ರ ಸರ್ಕಾರದ ಕೊನೆಯ ಪೂರ್ಣಾವಧಿ ಬಜೆಟ್ ಸಿದ್ದತೆ ವಿಷಯಗಳ ಬಗ್ಗೆಯೂ ಮೋದಿ ಚರ್ಚಿಸಿದರು.
ಆರ್ಥಿಕ ತಜ್ಞರೊಂದಿಗೆ ಸಮಾಲೋಚನೆ:
ಫೆ.1ರಂದು ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಮೋದಿ 40ಕ್ಕೂ ಹೆಚ್ಚು ಮಂದಿ ಆರ್ಥಿಕ ತಜ್ಞರು ಮತ್ತು ವಿವಿಧ ಕ್ಷೇತ್ರಗಳ ಪರಿಣಿತರೊಂದಿಗೆ ನಿನ್ನೆ ಸಮಾಲೋಚನೆ ನಡೆಸಿದರು.
Comments