ಜೆಡಿಎಸ್ ಖಂಡಿತ ಸ್ವತಂತ್ರ ಸರ್ಕಾರ ರಚಿಸುತ್ತದೆ : ಎಚ್ ವಿಶ್ವನಾಥ್

ರಾಜಕೀಯದಲ್ಲಿ ಹಲವು ಏರುಪೇರುಗಳನ್ನು ಅನುಭವಿಸಿದ್ದೇನೆ. ನಾಲ್ಕು ದಶಕ ಕಾಲ ಒಪ್ಪಿ, ಅದರಲ್ಲೇ ನಾನಾಗಿದ್ದ ಕಾಂಗ್ರೆಸ್ ಪಕ್ಷವನ್ನು ತ್ಯಜಿಸುವಂಥ ಸನ್ನಿವೇಶ ನಿರ್ಮಾಣವಾಯಿತು. ಅದಕ್ಕೆಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರ ಕಾರಣ. 2006ರಲ್ಲಿ ಉಪಮುಖ್ಯಮಂತ್ರಿ ಸ್ಥಾನವನ್ನೂ ಕಳೆದುಕೊಂಡು, ಏನೇನೂ ಇಲ್ಲದೆ ಬೀದಿಗೆ ಬಿದ್ದಿದ್ದಾಗ ನಾವು ಕೆಲವು ಸ್ನೇಹಿತರು ಕಾಂಗ್ರೆಸ್‌ನ ಹಿರಿಯ ನಾಯಕರನ್ನು, ಸೋನಿಯಾ ಗಾಂಧಿಯವರನ್ನು ಒಪ್ಪಿಸಿ ಕಾಂಗ್ರೆಸ್‌ಗೆ ಕರೆತಂದೆವು.
ಆ ಕಾಲಕ್ಕೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು ಯಾರಿಗೂ ಇಷ್ಟವಿರಲಿಲ್ಲ. ದೊಡ್ಡ ದೊಡ್ಡ ನಾಯಕರಾದ ಮೊಯ್ಲಿ, ಧರಂ ಸಿಂಗ್, ಖರ್ಗೆ, ಪೂಜಾರಿ, ಎಸ್ ಎಂ ಕೃಷ್ಣ ಎಲ್ಲರೂ, “ಆತ ಒರಟ, ದುರಹಂಕಾರಿ. ನಮ್ಮ ಪಕ್ಷಕ್ಕೆ ಯಾಕೆ?” ಎಂದೇ ಹೇಳುತ್ತಿದ್ದರು. “ಹಿಂದುಳಿದ ವರ್ಗಗಳ ನಾಯಕ. ಜನ ಸಮೂಹವನ್ನು ಆಕರ್ಷಿಸುವ ಶಕ್ತಿ ಇದೆ. ಯಾಕೆ ಅದನ್ನು ಉಪಯೋಗಿಸಿಕೊಳ್ಳಬಾರದು?” ಎಂದು ಹೇಳಿ ಎಲ್ಲರನ್ನೂ ಒಪ್ಪಿಸಿದೆವು. ನಂತರ ಪ್ರತಿಪಕ್ಷ ನಾಯಕರಾದರು, ಮುಖ್ಯಮಂತ್ರಿ ಪದವಿವರೆಗೆ ಕಾಂಗ್ರೆಸ್ ಅವರಿಗೆ ಅವಕಾಶ ಮಾಡಿಕೊಟ್ಟಿತು. ಅದಕ್ಕೆಲ್ಲ ಹಿನ್ನೆಲೆಯಾಗಿದ್ದವರು ನಾವು. ದೆಹಲಿಗೆ ಹೋದಾಗ ನಾನು, ರೇವಣ್ಣ ಗನ್‌ಮನ್ ಗಳ ಥರ ಜೊತೆಗಿರುತ್ತಿದ್ದೆವು. ನಾವೇ ಹೂಗುಚ್ಛ ಹಿಡಿದುಕೊಂಡು ಹೋಗಿ ನಾಯಕರಿಗೆ ಕೊಡಿಸುತ್ತಿದ್ದೆವು. ಆದರೆ, ಮುಖ್ಯಮಂತ್ರಿ ಆಗುತ್ತಿದ್ದಂತೆ ಯಾಕೋ ನಮ್ಮನ್ನೆಲ್ಲ ದೂರ ಮಾಡತೊಡಗಿದರು. ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತಗಳನ್ನು ಗಾಳಿಗೆ ತೂರಿ ತನ್ನದೇ ತತ್ವ, ಸಿದ್ಧಾಂತವನ್ನು ಹೇರತೊಡಗಿದರು. ಇದರಿಂದ ಪಕ್ಷಕ್ಕೆ, ನಾಡಿಗೆ, ನಮ್ಮ ಭವಿಷ್ಯಕ್ಕೆ ಒಳಿತಾಗುವುದಿಲ್ಲ ಎನ್ನಿಸತೊಡಗಿತು. ನಮ್ಮನ್ನಷ್ಟೇ ಅಲ್ಲ ಕಾಂಗ್ರೆಸ್ ತತ್ವ ಸಿದ್ಧಾಂತ, ಕಾರ್ಯಕ್ರಮ ಸಹಿತ ಸಂಪೂರ್ಣ ನೆಲೆಯನ್ನೇ ದೂರ ಮಾಡತೊಡಗಿದರು. ಆದ್ದರಿಂದ, ತಾಯಿಯಂತಿದ್ದ ಕಾಂಗ್ರೆಸ್ ಪಕ್ಷವನ್ನು ತೊರೆಯುವ ಸ್ಥಿತಿ ನಿರ್ಮಾಣವಾಯಿತು.ಇತ್ತೀಚೆಗಷ್ಟೆ ಕಾಂಗ್ರೆಸ್ ತ್ಯಜಿಸಿ ಜೆಡಿಎಸ್ ಸೇರಿರುವ ಮಾಜಿ ಸಚಿವ ಎಚ್ ವಿಶ್ವನಾಥ್ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ‘ದಿ ಸ್ಟೇಟ್’ ಜೊತೆ ಹಂಚಿಕೊಂಡಿದ್ದಾರೆ. ತಮ್ಮ ನೇರ ವ್ಯಕ್ತಿತ್ವ ಹಾಗೂ ಮಾತುಗಳಿಗೆ ಖ್ಯಾತರಾಗಿರುವ ಇವರು ತಾವು ಕಾಂಗ್ರೆಸ್ ತ್ಯಜಿಸಿದ್ದರ ಬಗ್ಗೆ ಇಲ್ಲಿ ವಿವರಿಸಿದ್ದಾರೆ.
Comments