ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಕೆಟ್ ಕೊಡುವ ಭರವಸೆ ನೀಡಿದ್ದಾರೆ : ಜಮೀರ್

09 Jan 2018 3:45 PM | Politics
470 Report

ಮುಂದಿನ ವಿಧಾನಸಭಾ ಅಧಿವೇಶನದ ನಂತರ ಕಾಂಗ್ರೆಸ್‍ಗೆ ಸೇರ್ಪಡೆಯಾಗಲಿದ್ದೇವೆ ಎಂದು ಜೆಡಿಎಸ್ ಬಂಡಾಯ ಶಾಸಕ ಜಮೀದ್ ಅಹಮದ್ ಖಾನ್ ತಿಳಿಸಿದ್ದಾರೆ. ಇಂದು ಬಂಡಾಯ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ನಿವಾಸದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿವೇಶನ ಮುಗಿದ ಬಳಿಕ ಫೆ.27 ಅಥವಾ 28 ರಂದು ಕಾಂಗ್ರೆಸ್‍ಗೆ ಸೇರಲಿದ್ದೇವೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನಾವು ಏಳು ಮಂದಿಗೆ ಟಿಕೆಟ್ ಕೊಡುವ ಭರವಸೆ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಯವರು ಸಹ ಟಿಕೆಟ್ ಖಾತ್ರಿಪಡಿಸಿದ್ದಾರೆ ಎಂದು ಹೇಳಿದರು. ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಅಖಂಡ ಶ್ರೀನಿವಾಸಮೂರ್ತಿಯವರು ನಮ್ಮ ಸ್ನೇಹಿತರು. ರಾಜ್ಯಸಭೆ ಚುನಾವಣೆಯಲ್ಲಿ ನಮಗೆ ಸಹಕರಿಸಿದ್ದರು. ಇದೀಗ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಭೇಟಿ ಮಾಡಲಾಯಿತು ಎಂದರು. ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಇಲ್ಲಿ ಹೈಕಮಾಂಡ್‍ನದ್ದೇ ಅಂತಿಮ ತೀರ್ಮಾನ ಎಂದು ಸ್ಪಷ್ಟಪಡಿಸಿದರು. ಅಖಂಡ ಶ್ರೀನಿವಾಸಮೂರ್ತಿ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರು ಪಾಲ್ಗೊಂಡಿದ್ದರು. ಆದರೆ ಡಿ.ಕೆ.ಶಿವಕುಮಾರ್ ಅವರು ಬಂದಿರಲಿಲ್ಲ. ಇಂದು ಆಗಮಿಸಿದ್ದಾರೆ ಎಂದರು. ಜಮೀರ್ ಅಹಮ್ಮದ್ ಅವರ ನೇತೃತ್ವದಲ್ಲಿ ನಾವೆಲ್ಲ ಸೇರ್ಪಡೆಗೊಳ್ಳುತ್ತಿದ್ದೇವೆ. ಟಿಕೆಟ್ ನೀಡುವ ವಿಚಾರ ಹೈಕಮಾಂಡ್‍ಗೆ ಬಿಟ್ಟಿದ್ದು ಎಂದು ತಿಳಿಸಿದರು.

Edited By

Shruthi G

Reported By

Madhu shree

Comments