ಸಿದ್ದರಾಮಯ್ಯನವರೇ, ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಜನತೆ ಆಶೀರ್ವದಿಸುತ್ತಾರೆ : ಎಚ್ ಡಿಡಿ

ಪಾವಗಡದಲ್ಲಿ ನಡೆದ ಯುವ ಜೆಡಿಎಸ್ ಕಾರ್ಯಕರ್ತರ ಸಭೆ ಮತ್ತು ಮನೆಮನೆಗೆ ಕುಮಾರಣ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದೇವೇಗೌಡರು, ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಜನತೆ ಆಶೀರ್ವಾದ ಮಾಡುತ್ತಾರೆ, ಶಕ್ತಿ ತುಂಬುತ್ತಾರೆ, ಜೆಡಿಎಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ. ಆಗ ನೀವು ಏನು ಎಂಬುದು ಜನತೆಗೆ ತಿಳಿಯುತ್ತದೆ ಎಂದರು.
ಜೆಡಿಎಸ್ ಈಸ್ ಡೆಡ್ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರ ಕೆಲವರು ಹೋದಬಂದ ಕಡೆಯಲ್ಲೆಲ್ಲ ಟೀಕಿಸಿಕೊಂಡು ತಿರುಗುತ್ತಿದ್ದಾರೆ. ಅವರು ಈ ಜನರನ್ನು, ಅವರ ಅಭಿಮಾನವನ್ನು ನೋಡಬೇಕಿತ್ತು. ಆಗ ಅವರಿಗೆ ಜೆಡಿಎಸ್ ನ ಶಕ್ತಿ ತಿಳಿಯುತ್ತಿತ್ತು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು. ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಹೆಗಲ ಮೇಲೆ ಕೂರಿಸಿಕೊಂಡು ಹಂತಹಂತವಾಗಿ ರಾಜಕೀಯದ ಮೆಟ್ಟಿಲನ್ನು ಹತ್ತಿಸಿ ಉಪಮುಖ್ಯಮಂತ್ರಿವರೆಗೂ ಬೆಳೆಸಿದೆ. ಅಂತಹ ವ್ಯಕ್ತಿ ಇಂದು ಜೆಡಿಎಸ್ ಸತ್ತು ಹೋಗಿದೆ. ಇದ್ದರೆ ಕೇವಲ ಎರಡು ಜಿಲ್ಲೆಯಲ್ಲಿ ಜೀವಂತ ಇರಬಹುದು ಎನ್ನುತ್ತಾರೆ.
ನನ್ನ ಮಗನನ್ನೇ ಮುಖ್ಯಮಂತ್ರಿ ಮಾಡಬೇಕೆಂದು ನನ್ನಲ್ಲಿ ಇದ್ದಿದ್ದರೆ ನಾನು ಸಿದ್ದರಾಮಯ್ಯರವರನ್ನೂ ಬೆಳೆಸುತ್ತಿರಲಿಲ್ಲ, ಇತರೆ ನಾಯಕರನ್ನೂ ಬೆಳೆಸುತ್ತಿರಲಿಲ್ಲ. ಸಿದ್ದರಾಮಯ್ಯ ಯಾಕೆ ತನ್ನ ಮಗನನ್ನು ಚುನಾವಣೆಗೆ ನಿಲ್ಲಿಸ್ತಾ ಇದ್ದಾರೆ, ಶಾಸಕನನ್ನಾಗಿ ಮಾಡಲು ಮಂತ್ರಿ ಮಾಡಲೆಂದೇ ಎಂಬುದು ಅವರಿಗೆ ತಿಳಿದಿಲ್ಲವೇ, ಮಾತನಾಡಬೇಕಾದರೆ ಯೋಚಿಸಬೇಕು ಎಂದ ದೇವೇಗೌಡರು, ದೀನದಲಿತರನ್ನು, ರಾಜಕೀಯವಾಗಿ ಅಲ್ಪಸಂಖ್ಯಾತರಾಗಿದ್ದವರನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿಯಾಗಿತ್ತು ಎಂದರು. ರಾಜ್ಯದೆಲ್ಲೆಡೆ ಹೊಸ ಗಾಳಿ ಬೀಸುತ್ತಿದೆ. ರಾಜಕೀಯ ಪರಿವರ್ತನೆ ಆಗಲಿದೆ. ಪಕ್ಷ ಸಂಘಟಿಸಬೇಕು ಎಂಬುದೇ ನನ್ನ ಗುರಿ. ಅದಕ್ಕಾಗಿ ಒಂದು ಬಾರಿಯಲ್ಲಾ, ಎಷ್ಟೂ ಬಾರಿಯಾದರೂ ರಾಜ್ಯ ಸುತ್ತಲು ಸಿದ್ಧನಿದ್ದೇನೆ. ಪ್ರಾದೇಶಿಕ ಪಕ್ಷವೊಂದು ಅಧಿಕಾರ ಬರಬೇಕು. ಆ ಮೂಲಕ ರಾಜ್ಯ ಅಭಿವೃದ್ಧಿಯಾಗಬೇಕೆಂಬುದೇ ನನ್ನ ಗುರಿ ಎಂದರು.
Comments