ಆಪರೇಷನ್ ಕಮಲ : ಜೆಡಿಎಸ್ - ಕಾಂಗ್ರೆಸ್ ನಾಯಕರು ಬಿಜೆಪಿಯತ್ತ ಮುಖ
'ಸಂಕ್ರಾಂತಿ ಬಳಿಕ ರಾಜ್ಯ ರಾಜಕೀಯದಲ್ಲಿ ಹಲವು ಬದಲಾವಣೆಗಳು ವಿವಿಧ ಪಕ್ಷಗಳ ಮುಖಂಡರು ಬಿಜೆಪಿ ಸೇರಲಿದ್ದಾರೆ' ಎಂದು ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ ಹೇಳಿದ್ದರು. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸಹ ಬದಲಾವಣೆಗಳು ಆಗಲಿವೆ ಎಂದಿದ್ದರು. ಆದರೆ, ಈಗ ಅವರ ಪಕ್ಷದ ಶಾಸಕರು ಆಪರೇಷನ್ ಕಮಲಕ್ಕೆ ಒಳಗಾಗಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಜೆಡಿಎಸ್‌ನ ಇಬ್ಬರು ಶಾಸಕರು ಸಂಕ್ರಾಂತಿ ಬಳಿಕ ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದೆ. ಜ.28ರಂದು ನವ ಕರ್ನಾಟಕ ಪರಿವರ್ತನಾ ಯಾತ್ರೆ ಸಮಾರೋಪ ಸಮಾರಂಭ ಬೆಂಗಳೂರಿನಲ್ಲಿ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂದು ಶಾಸಕರು ಬಿಜೆಪಿ ಸೇರುವ ಸಾಧ್ಯತೆ ಇದೆ. ಆಪರೇಷನ್ ಕಮಲ ಯಾರ ಮೇಲೆ?... ಲಿಂಗಸಗೂರು ಶಾಸಕ ಮಾನಪ್ಪ ವಜ್ಜಲ್, ರಾಯಚೂರು ಶಾಸಕ ಡಾ.ಶಿವರಾಜ್ ಪಾಟೀಲ್, ಮದ್ದೂರಿನ ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಅವರು ಜೆಡಿಎಸ್ ತೊರೆದು ಬಿಜೆಪಿ ಸೇರುವ ಸಾಧ್ಯತೆ ಇದೆ. ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜ್ ಬಿಜೆಪಿ ಸೇರುವ ಸಾಧ್ಯತೆ ಇದೆ. ಒಂದು ವೇಳೆ ಅವರು ಪಕ್ಷ ಸೇರಿದರೆ ರಾಮನಗರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಎದುರು ಕಣಕ್ಕಿಳಿಯಲಿದ್ದಾರೆ.
ಮಾಜಿ ಸಂಸದ ಜಿ.ಮಾದೇಗೌಡ ಪುತ್ರ ಮಾಜಿ ವಿಧಾನ ಪರಿಷತ್ ಸದಸ್ಯ ಮಧು ಮಾದೇಗೌಡ ಅವರು ಬಿಜೆಪಿ ಸೇರುವ ತಯಾರಿಯಲ್ಲಿದ್ದಾರೆ. (ಚಿತ್ರ : ಪಿ.ನಾಗರಾಜ್). ಯಾದಗಿರಿ ಶಾಸಕ ಡಾ.ಎ.ಬಿ.ಮಾಲಕ ರೆಡ್ಡಿ ಅವರು ಈಗಾಗಲೇ ಕಾಂಗ್ರೆಸ್ ತೊರೆಯುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆಯೇ ಹೇಳಿ ಬಂದಿದ್ದಾರೆ. ಅತ್ತ ಅಫ್ಜಲ್‌ಪುರ ಶಾಸಕ ಮಾಲೀಕಯ್ಯ ಗುತ್ತೇದಾರ್ ಸಹ ಕಾಂಗ್ರೆಸ್ ತೊರೆಯಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಇಬ್ಬರೂ ನಾಯಕರು ಬಿಜೆಪಿ ಸೇರಬಹುದು ಎಂಬುದು ಲೆಕ್ಕಾಚಾರ. ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜು ಅವರು ಕಳೆದ ಚುನಾವಣೆಯಲ್ಲಿಯೇ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಟಿಕೆಟ್ ಸಿಗದೇ ಕೆಎಂಎಫ್ಅಧ್ಯಕ್ಷರಾಗಿದ್ದರು. 20 ತಿಂಗಳ ಬಳಿಕ ಅಧ್ಯಕ್ಷ ಪಟ್ಟವನ್ನು ಹರಪನಹಳ್ಳಿ ಶಾಸಕ ಎಂ.ಪಿ.ರವೀಂದ್ರಗೆ ಬಿಟ್ಟು ಕೊಡಲು ವಿರೋಧ ವ್ಯಕ್ತಪಡಿಸಿದ್ದರು. ಲಿಂಗಸಗೂರು ಶಾಸಕ ಮಾನಪ್ಪ ವಜ್ಜಲ್, ರಾಯಚೂರು ಶಾಸಕ ಡಾ.ಶಿವರಾಜ್ ಪಾಟೀಲ್, ಕಲ್ಪನಾ ಸಿದ್ದರಾಜು ಅವರು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜೊತೆ ಮಾತುಕತೆ ನಡೆಸಿದ್ದಾರೆ. ಸಂಕ್ರಾಂತಿ ಬಳಿಕ ಮೂವರು ಪಕ್ಷ ಸೇರುವ ಸಾಧ್ಯತೆ ಇದೆ ಎಂಬ ಸುದ್ದಿ ದಟ್ಟವಾಗಿ ಹಬ್ಬಿದೆ.
Comments