ರೈತರ ಭಾವನೆಗಳೊಂದಿಗೆ ಆಟವಾಡಿದ ಪಕ್ಷಗಳಿಗೆ ತಕ್ಕ ಪಾಠ ಕಲಿಸಿ : ಪ್ರಜ್ವಲ್ ರೇವಣ್ಣ
'ನಮ್ಮದು ಪ್ರಾದೇಶಿಕ ಪಕ್ಷ, ರೈತಪರವಾದ ಪಕ್ಷ, ರಾಷ್ತ್ರೀಯ ಪಕ್ಷಗಳ ಹಾಗೆ ಡೊಂಗಿ ಪಕ್ಷವಲ್ಲ, ಮಹದಾಯಿ ವಿಚಾರವಾಗಿ ರೈತರ ಭಾವನೆಗಳ ಜತೆ ಆಟವಾಡಿದ ಎರಡು ರಾಷ್ಟ್ರೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸಿ' ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ ಅವರು ಕರೆ ನೀಡಿದರು. ಇದೇ ಮೊದಲ ಬಾರಿಗೆ ಎಂ.ಕೆ.ಹುಬ್ಬಳ್ಳಿ ಪಟ್ಟಣದಲ್ಲಿ ಭಾಷಣ ಮಾಡಿದ ಪ್ರಜ್ವಲ್ ರೇವಣ್ಣ ಅವರು ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸುವ ಸರ್ಕಾರಗಳಿಗೆ ಚುನಾವಣೆಯಲ್ಲಿ ತಕ್ಕ ಉತ್ತರ ಕಲಿಸಿ, ಮಹದಾಯಿಗಾಗಿ ಹೋರಾಟ ಮಾಡಿದ ರೈತರ ಮೇಲೆ ಪೊಲೀಸರನ್ನು ಬಿಟ್ಟು ಹೊಡೆಸಿದ ಸರ್ಕಾರಕ್ಕೆ ತಕ್ಕ ಬುದ್ಧಿ ಕಲಿಸಿ ಎಂದರು. ಮಹದಾಯಿ ಹೋರಾಟದಲ್ಲಿ ರೈತರು ಪ್ರಾಣ ಕಳೆದುಕೊಳ್ಳುತ್ತಿದ್ದರೆ, ಅತ್ತ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಕೈಯಲ್ಲಿ ಪತ್ರ ಹಿಡಿದು ರೈತರನ್ನು ಯಾಮಾರಿಸುತ್ತಿದ್ದಾರೆ. ರಾಜ್ಯದ ಸಿಎಂ ಸಿದ್ದರಾಮಯ್ಯನವರು ಮಹದಾಯಿಗಾಗಿ ಪ್ರಧಾನಿಗೆ ಪತ್ರ ಬರೆದಿದ್ದೇವೆ ಎನ್ನುತ್ತ ಸುತ್ತುತ್ತಾರೆ ಎಂದು ಕಿಡಿಕಾರಿದರು. ಜೆಡಿಎಸ್ ಅಧಿಕಾರಕ್ಕೆ ಬಂದ 24ಗಂಟೆಯಲ್ಲಿ ರಾಜ್ಯದ ಎಲ್ಲ ರೈತರ ಸಾಲ ಮನ್ನಾ ಮಾಡುತ್ತೇವೆ.
ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ದಲಿತರೊಬ್ಬರನ್ನು ಹಾಗೂ ಮುಸ್ಲಿಂರೊಬ್ಬರನ್ನು ಉಪ ಮುಖ್ಯಮಂತ್ರಿ ಮಾಡುತ್ತೇವೆಂದು ನಮ್ಮ ರಾಜ್ಯಾಧ್ಯಕ್ಷರಾದ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಮಹದಾಯಿಗಾಗಿ ಹೋರಾಡುತ್ತಿರುವ ರೈತರನ್ನು ಒಮ್ಮೆಯೂ ಪ್ರಧಾನಿ ನರೇಂದ್ರ ಮೋದಿ ಬಂದು ಮಾತನಾಡಿಸಿ, ಸಮಸ್ಯೆಗೆ ಪರಿಹಾರ ನೀಡುತ್ತೇನೆಂದು ಹೇಳಿಲ್ಲ. ಗೋವಾದಲ್ಲಿ ಸಭೆ ನಡೆಸಿ ಸೋನಿಯಾ ಗಾಂಧಿ, ಮಹದಾಯಿ ನೀರು ಯಾವುದೇ ಕಾರಣಕ್ಕೂ ಕರ್ನಾಟಕಕ್ಕೆ ಬಿಡುವುದಿಲ್ಲ ಎನ್ನುತ್ತಾರೆ. ಮುಖ್ಯಮಂತ್ರಿಗಿಂತ ಸೋನಿಯಾ ಗಾಂಧಿ ಅವರೆ ದೊಡ್ಡವರಾದರಾ.? ಮಹದಾಯಿ ಹೋರಾಟಕ್ಕೆ ಪಣ ತೊಟ್ಟು ನಿಂತಿದ್ದು ಜೆಡಿಎಸ್ ಪಕ್ಷ ಎಂಬುದನ್ನು ನೆನಪಿಡಿ ಎಂದು ಪ್ರಜ್ವಲ್ ಹೇಳಿದರು.
Comments