ಮುಂಬರುವ ಚುನಾವಣೆಯಲ್ಲಿ ದುರ್ಗದಿಂದ ಸ್ಪರ್ಧಿಸಲಿರುವ ಭಾವನಾ

ಮುಂದಿನ ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ' ಎಂದು ನಟಿ, ಕೆಪಿಸಿಸಿ ಕಾರ್ಯದರ್ಶಿ ಭಾವನಾ ಅವರು ಹೇಳಿದ್ದಾರೆ. 'ಚಂದ್ರಮುಖಿ ಪ್ರಾಣಸಖಿ' ಸೇರಿದಂತೆ ಹಲವು ಚಿತ್ರಗಳಲ್ಲಿ ತಮ್ಮ ನೈಜ ಅಭಿನಯದ ಮೂಲಕ ಕನ್ನಡ ಸಿನಿರಸಿಕರ ಮನಗೆದ್ದಿರುವ ಭಾವನಾ ಅವರು ಈಗ ಜನಪ್ರತಿನಿಧಿಯಾಗಲು ಮುಂದಾಗಿದ್ದಾರೆ. ಕೋಟೆ ನಾಡು ಚಿತ್ರದುರ್ಗದ ಕಾಂಗ್ರೆಸ್ ಟಿಕೆಟ್ ಅಕಾಂಕ್ಷಿ ಎಂದು ಘೋಷಿಸಿದ್ದಾರೆ.
ಇಲ್ಲಿನ ಬುರುಜನಹಟ್ಟಿಯ ಹುಡುಗಿ ನಾನಾಗಿದ್ದು, ಇಲ್ಲಿಂದಲೇ ಚುನಾವಣೆಗೆ ಸ್ಪರ್ಧಿಸಬೇಕೆಂಬ ಇಚ್ಛೆ ಹೊಂದಿದ್ದೇನೆ. ಪಕ್ಷದ ಹಿರಿಯರು ಬೆನ್ನು ತಟ್ಟಿ ಕಳಿಸಿದ್ದಾರೆ. ಇತ್ತೀಚೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಬಂದಿರುವ ಭಾವನಾ ಅವರು ತಮ್ಮ ಊರಿಗೆ ಭೇಟಿಯಿತ್ತ ಸಂದರ್ಭದಲ್ಲಿ ತಮ್ಮ ಚುನಾವಣೆ ಸ್ಪರ್ಧೆ ಬಗ್ಗೆ ಹೇಳಿದರು.
ಜಿಲ್ಲೆಯ ಮುಖಂಡರು, ಸಚಿವರು, ಕಾರ್ಯಕರರು, ಜನತೆ ಜತೆ ಚರ್ಚೆ ನಡೆಸಿ ಮಾರ್ಗದರ್ಶನ ಪಡೆಯುತ್ತೇನೆ.ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತೇನೆ ಎಂದು ಭಾವನಾ ಹೇಳಿದ್ದಾರೆ.
ಕ್ಷೇತ್ರದಲ್ಲಿ ಮನೆ ಮಾಡಿದ ಭಾವನಾ: ಮಂಡ್ಯದಲ್ಲಿ ಮನೆ ಬಾಡಿಗೆಗೆ ಪಡೆದು ಸುದ್ದಿಯಾಗಿದ್ದ ಮಾಜಿ ಸಂಸದೆ ರಮ್ಯಾರಂತೆ, ಭಾವನಾ ಅವರು ಕೂಡಾ ಚಳ್ಳಕೆರೆ ಗೇಟ್ ಬಳಿ 60 X 40 ವಿಸ್ತೀರ್ಣದ ಮನೆಯೊಂದನ್ನು ಬಾಡಿಗೆಗೆ ಪಡೆದುಕೊಂಡಿದ್ದಾರೆ. ಕ್ಷೇತ್ರದ ಸಮಸ್ಯೆ, ಜನರ ಜತೆ ಒಡನಾಟ ಬೆಳೆಸಿಕೊಳ್ಳಲು ಆರಂಭಿಸಿರುವ ಭಾವನಾ ಅವರು, ಇಲ್ಲಿನ ಟಿಕೆಟ್ ಆಕಾಂಕ್ಷಿಗಳಿಗೆ ಭಾರಿ ಪೈಪೋಟಿ ಒಡ್ಡುತ್ತಿದ್ದಾರೆ. ಸದ್ಯ ವಿಧಾನಪರಿಷತ್ ಸದಸ್ಯ ರಘು ಆಚಾರ್ ಅವರಿಗೆ ಟಿಕೆಟ್ ಸಿಗುವ ಎಲ್ಲಾ ಸಾಧ್ಯತೆಗಳು ಹೆಚ್ಚಿವೆ. ಉಳಿದಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಬಸವರಾಜ್, ವಿಮಾನಯಾನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹನುಮಲಿ ಷಣ್ಮುಖಪ್ಪ ಅವರ ನಡುವೆ ಪೈಪೋಟಿ ನಡೆಸಿ ಭಾವನಾ ಅವರು ಟಿಕೆಟ್ ಪಡೆದುಕೊಳ್ಳುವರೇ ಕಾದು ನೋಡಬೇಕಿದೆ.
Comments