ಮೋದಿ ಬಂದ ಮೇಲೆಯೂ ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿಲ್ಲ : ಅಣ್ಣ ಹಜಾರೆ

ನಗರದ ಸಾಹಿತ್ಯ ಭವನದಲ್ಲಿ ನಡೆದ ಸಂವಾದ ಕಾರ್ಯಕ್ರಮದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಣ್ಣಾ ಹಜಾರೆ, ದೇಶದಲ್ಲಿ ಈಗ ಮಿತಿಮೀರಿದ ಭ್ರಷ್ಟಾಚಾರ ನಡೆದಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಾದರೆ ಬಲವಾದ ಲೋಕಪಾಲ್ ಬಿಲ್ ಜಾರಿ ಮಾಡಬೇಕು. ಆದರೆ, ಗಟ್ಟಿಯಾದ ಲೋಕಪಾಲ್ ಮಸೂದೆಯನ್ನು ಜಾರಿ ಮಾಡಲು ರಾಜಕಾರಣಿಗಳಿಗೆ ಇಚ್ಛಾಶಕ್ತಿ ಇಲ್ಲ. .
ಏಕೆಂದರೆ, ಇದರಿಂದ ಅವರ ಅಧಿಕಾರಕ್ಕೆ ಕುತ್ತು ಬರುತ್ತದೆ. ಪ್ರಧಾನಮಂತ್ರಿ ಸೇರಿದಂತೆ ಎಲ್ಲರನ್ನೂ ಈ ಬಿಲ್‍ನಲ್ಲಿ ಸೇರಿಸಲಾಗಿದೆ. ಹೀಗಾಗಿ, ಇದನ್ನು ಅನುಷ್ಠಾನ ಮಾಡೋದಿಲ್ಲ ಎಂದರು. ಫೋರ್ಬ್ಸ್ ವರದಿ ಪ್ರಕಾರ ನಮ್ಮ ದೇಶವು ಭ್ರಷ್ಟಾಚಾರದಲ್ಲಿ ಏಷ್ಯಾದಲ್ಲೇ ಮೊದಲ ಸ್ಥಾನದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಬಂದ ಮೇಲೆಯೂ ಭ್ರಷ್ಟಾಚಾರ ಇನ್ನೆಲ್ಲಿ ಕಡಿಮೆಯಾಗಿದೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಬೇಸರ ವ್ಯಕ್ತಪಡಿಸಿದರು. ಇನ್ನು ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಗಲಭೆಗಳ ಬಗ್ಗೆ ಮಾಹಿತಿ ಇಲ್ಲ. ಮಾಹಿತಿ ತೆಗೆದುಕೊಂಡು ಮಾತನಾಡುತ್ತೇನೆ. ಒಂದು ತಿಂಗಳಿಂದ ರಾಜ್ಯದಿಂದ ಹೊರಗಿದ್ದೇನೆ. ಈ ರೀತಿಯ ಘಟನೆಯ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ ಎಂದರು. ದಲಿತರನ್ನು ಜೊತೆ ಜೊತೆಯಾಗಿ ತೆಗೆದುಕೊಂಡು ಹೋಗಬೇಕೆನ್ನುವುದೇ ನಮ್ಮ ಆಶಯ. ಇದೇ ಕೆಲಸದಲ್ಲಿ ನಾವು ತೊಡಗಿಕೊಂಡಿದ್ದೇವೆ. ಜಾತಿಯ ವಿಷವನ್ನು ಪಕ್ಷ ಮತ್ತು ಪಾರ್ಟಿಗಳು ಸೃಷ್ಟಿಸುತ್ತಿವೆ. ಇನ್ನು ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ನೀರು ಮತ್ತು ಗಡಿಗಳ ವ್ಯಾಜ್ಯಗಳನ್ನು ಸರಿಯಾಗಿ ನಿರ್ವಹಣೆ ಮಾಡುವುದರಿಂದ ನಿಭಾಯಿಸಬಹುದು. ಬೇಕಂತಲೇ ಈ ವಿಷಯದಲ್ಲಿ ರಾಜಕೀಯ ಮಾಡಲಾಗುತ್ತಿದೆ ಎಂದು ಹೇಳಿದರು. ಪ್ರಶ್ನೆ ಮಾಡುವ ಬದಲಿಗೆ ನೀವೆ ಎಲ್ಲರೂ ಅಣ್ಣಾ ಹಜಾರೆಯಾಗಬೇಕಿದೆ. ಮಲಗಿದವರನ್ನು ಎಬ್ಬಿಸಬಹುದು, ಆದರೆ ನಟಿಸುವವರನ್ನು ಎಬ್ಬಿಸಲಾಗುತ್ತಾ ಎಂದು ಅಣ್ಣಾ ಹಜಾರೆ ಪ್ರಶ್ನಿಸಿದರು.
Comments