ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ್ನು ಮಣಿಸಲು ಜೆಡಿಎಸ್ ಮಾಸ್ಟರ್ ಪ್ಲಾನ್
ಕಾಂಗ್ರೆಸ್‌ನಿಂದ ದೂರಕ್ಕೆ ಸರಿಯುತ್ತಿರುವ ಇಲ್ಲಿನ ರಾಜಕೀಯ ಶಕ್ತಿಕೇಂದ್ರ ವೈಟ್ ಹೌಸ್‌ಅನ್ನು ಹೇಗಾದರೂ ಮಾಡಿ ಜಾತ್ಯತೀತ ಜನತಾದಳಕ್ಕೆ ಸೆಳೆದುಕೊಳ್ಳಬೇಕು ಎಂದು ಜೆಡಿಎಸ್ ನಾಯಕರು ಮುಂದಾಗಿದ್ದು, ಇದ ಬೆನ್ನಲ್ಲೇ ರಾಘವೇಂದ್ರ ಕುಲಕರ್ಣಿ ಎಂಬ ಯುವಕನ ಪೌರೋಹಿತ್ಯ ಕೆಲಸ ಮಾಡಿದೆ. ಖಾಸಗಿ ವಾಹಿನಿಯಲ್ಲಿ ಆ್ಯಂಕರ್ ಸೇವೆ ಸಲ್ಲಿಸಿರುವ ರಾಘವೇಂದ್ರ ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.
2018ರ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದ ಜೆಡಿಎಸ್ ಪಕ್ಷದ ಪರವಾಗಿ ಸ್ಪರ್ಧಿಸುವ ಮಹತ್ವಕಾಂಕ್ಷೆಯೊಂದಿಗೆ ಬೆಂಗಳೂರು ತೊರೆದು ನಗರಕ್ಕೆ ಆಗಮಿಸಿ ಕೇವಲ ಆರು ತಿಂಗಳಲ್ಲಿ ಕ್ಷೇತ್ರದ ರಾಜಕೀಯ ವಿದ್ಯಮಾನದ ನಾಡಿ ಮಿಡಿತ ಹಿಡಿಯಲು ಯತ್ನಿಸುತ್ತಿದ್ದಾರೆ. ಈ ಮಧ್ಯೆ ಪಕ್ಷದಲ್ಲಿನ ತಾರತಮ್ಯ, ಗುಂಪುಗಾರಿಕೆ, ಸಿಎಂ ಸಿದ್ದು ಮೇಲಿನ ಮುನಿಸಿನಿಂದಾಗಿ ಐದು ದಶಕಗಳಷ್ಟು ಕಾಂಗ್ರೆಸ್‌ನೊಂದಿಗಿನ ತಮ್ಮ ಸಂಬಂಧವನ್ನು ಇಲ್ಲಿನ ಮಾಜಿ ಸಂಸದ ಹೆಚ್.ಜಿ. ರಾಮುಲು ಮತ್ತು ಅವರ ಪುತ್ರ ಮಾಜಿ ಶಾಸಕ ಹೆಚ್.ಆರ್. ಶ್ರೀನಾಥ್ ಕಡಿದುಕೊಂಡಿದ್ದಾರೆ.ಇದನ್ನೇ ಲಾಭವಾಗಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಾದ ರಾಘವೇಂದ್ರ ಕುಲಕರ್ಣಿ, ಶ್ರೀನಾಥ್ ಪಕ್ಷಕ್ಕೆ ಬಂದರೆ ಸಂಘಟನೆಗೆ ಬಲ ಬರಲಿದೆ ಎಂದು ಜಿಲ್ಲೆಯ ಎಲ್ಲ ರಾಜಕೀಯ ವಿದ್ಯಮಾನಗಳನ್ನು ಪಕ್ಷದ ವರಿಷ್ಠರ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ. ಜೆಡಿಎಸ್‌ಗೆ ಸಡ್ಡು ಹೊಡೆದಿರುವ ಶಾಸಕ ಇಕ್ಬಾಲ್ ಅನ್ಸಾರಿ ಅವರನ್ನು ಬಗ್ಗುಬಡಿಯಲು ಇದೇ ಸುಸಮಯ ಎಂದು ಕಾಯುತ್ತಿರುವ ಜೆಡಿಎಸ್ ವರಿಷ್ಠರಿಗೆ ಅವಕಾಶವೊಂದು ಅನಾಯಸವಾಗಿ ಒಲಿದು ಬಂದಿದೆ. ಇದೇ ಕಾರಣಕ್ಕೆ ಸ್ವತಃ ದೇವೇಗೌಡರು ಅಖಾಡಕ್ಕಿಳಿದು ಮಾಜಿ ಸಂಸದರ ಕುಟುಂಬವನ್ನು ಜೆಡಿಎಸ್ ರಾಜಕೀಯದ ಅಂಗಳಕ್ಕೆ ಕರೆತರಲು ಯತ್ನಿಸುತ್ತಿದೆ ಎನ್ನಲಾಗಿದೆ.
Comments