ಬಿಜೆಪಿಯ ಮತ್ತೊಂದು ವಿಕೆಟ್ ಜೆಡಿಎಸ್ ಗೆ
ಕಾರವಾರದಲ್ಲಿ ಭೇಟಿಯಾದ ಸುದ್ದಿಗಾರರ ಜೊತೆ ಮಾತನಾಡಿದ ಆಸ್ನೋಟಿಕರ್ ಅವರು, ನಾನಿನ್ನು ತಾಂತ್ರಿಕವಾಗಿ ಬಿಜೆಪಿಯಲ್ಲಿದ್ದೇನೆ. ಆದರೆ ಸ್ಥಳೀಯ ಬಿಜೆಪಿ ಪದಾಧಿಕಾರಿಗಳು ಪಕ್ಷದ ಕಚೇರಿಗೆ ಹೋಗಲು ಬಿಡಲಿಲ್ಲ. ನಾಯಕರು ಭೇಟಿಯಾಗಲು ದಿನಾಂಕ ಸಹ ನೀಡಲಿಲ್ಲ. ಆದರೂ ನಾನು ಪಕ್ಷ ವಿರೋಧಿ ಕೆಲಸ ಮಾಡಿಲ್ಲ. ಪಕ್ಷದ ನಾಯಕರನ್ನು ಟೀಕಿಸಿಲ್ಲ. ಹಾಗೂ ಪಕ್ಷಕ್ಕೆ ಡ್ಯಾಮೇಜ್ ಮಾಡುವ ಹೇಳಿಕೆ ನೀಡಿಲ್ಲ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಹೇಳಿದರು.
ಸಮಾಜವಾದಿ ಎಸ್.ಬಂಗಾರಪ್ಪಜೀ ವಸಂತ ಅಸ್ನೋಟಿಕರ್ ಅವರನ್ನು ರಾಜಕೀಯಕ್ಕೆ ಕರೆ ತಂದಿದ್ದರು. ಕಳೆದ 20 ವರ್ಷದಿಂದ ನಮ್ಮ ಕುಟುಂಬ ರಾಜಕಾರಣದಲ್ಲಿದೆ. ಅತ್ಯಂತ ಕಿರಿ ವಯಸ್ಸಿನಲ್ಲೇ ನಾನು ರಾಜಕಾರಣಕ್ಕೆ ಬಂದು ಸಚಿವ ಹುದ್ದೆ ನಿರ್ವಹಿಸಿದ್ದೇನೆ. ವಯಸ್ಸು ಚಿಕ್ಕದಾಗಿದ್ದ ಕಾರಣ ನಿರ್ಧಾರ ತೆಗೆದುಕೊಳ್ಳುವಲ್ಲಿ ಕೆಲ ತಪ್ಪುಗಳಾಗಿವೆ. ಇನ್ನು ಮುಂದೆ ಅಂಥ ತಪ್ಪುಗಳು ಆಗುವುದಿಲ್ಲ. ಮೇಲಾಗಿ ಕ್ಷೇತ್ರದ ಅಭಿಮಾನಿಗಳು ಸಕ್ರಿಯ ರಾಜಕಾರಣಕ್ಕೆ ಬರಲು ಕಳೆದ ನವೆಂಬರ್ 11 ರಂದು ಒತ್ತಾಯಿಸಿದ್ದರು. ಹಾಗಾಗಿ ಸಕ್ರಿಯ ರಾಜಕಾರಣಕ್ಕೆ ಬರುವೆ. ಮಧು ಬಂಗಾರಪ್ಪ ಅವರ ಜೊತೆ ಸಂಪರ್ಕದಲ್ಲಿದ್ದೇನೆ ಎಂದರು.ಆಸ್ನೋಟಿಕರ್ ಜೆಡಿಎಸ್ ಪಕ್ಷಕ್ಕೆ ಜಿಗಿಯಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಹಾಲಿ ಶಾಸಕರು ಆಯ್ಕೆಯಾದ ಮೇಲೆ ನಾನು ಕೆಲವು ದಿನ ಮೌನವಾಗಿದ್ದೆ. ಅವರ ಕೆಲಸಗಳನ್ನು ಕ್ಷೇತ್ರದ ಜನತೆ ಗಮನಿಸಲಿ ಎಂಬುದು ನನ್ನ ಉದ್ದೇಶವಾಗಿತ್ತು. ಆದರೆ ಕ್ಷೇತ್ರದಲ್ಲಿ ನಾನು ನನ್ನ ಕಾರ್ಯಕರ್ತರ ಜೊತೆ ಸಂಪರ್ಕದಲ್ಲಿದ್ದೆ. ಕ್ಷೇತ್ರದಲ್ಲಿ ಹಲವು ಕೆಲಸಗಳು ಪೂರ್ಣವಾಗಿಲ್ಲ. ಆಗಬೇಕಿದ್ದ ಮುಖ್ಯ ಕೆಲಸಗಳು ಆಗಿಲ್ಲ. ಅಲ್ಲದೇ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. 2000 ಯುವಕರಿಗೆ ಉದ್ಯೋಗ ಸಿಗುವಂತಹ ಕೈಗಾರಿಕೆ ಬರಬೇಕಿತ್ತು. ಅದನ್ನು ಮುಂದಿನ ದಿನಗಳಲ್ಲಿ ಮಾಡಬೇಕಿದೆ. ಅಲ್ಲದೇ ಸೀಬರ್ಡ್ ಎರಡನೇ ಹಂತದ ಕಾಮಗಾರಿಯಿಂದ ಸ್ಥಳೀಯರಿಗೆ ಏನು ಪ್ರಯೋಜನವಿಲ್ಲ. ಅದರ ಲಾಭ ದೊಡ್ಡ ದೊಡ್ಡ ಕಂಪನಿಗಳಿಗೆ ಮಾತ್ರ ಎಂದು ಮಾಜಿ ಸಚಿವ ಆಸ್ನೋಟಿಕರ್ ಅಭಿಪ್ರಾಯಪಟ್ಟರು.
Comments