ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ವಿತರಿಸಿದ ಸಿಎಂ ಸಿದ್ದರಾಮಯ್ಯ

ಪಿಯುಸಿ ನಂತರದ ಶಿಕ್ಷಣ ಪಡೆಯುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 31ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ವಿತರಣೆ ಆರಂಭಿಸಲಾಗಿದ್ದು, ಶೀಘ್ರದಲ್ಲೇ ಹಿಂದುಳಿದವರ್ಗದವರು ಸೇರಿದಂತೆ ಸಾಮಾನ್ಯ ವರ್ಗದ ಒಂದೂವರೆ ಲಕ್ಷ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್‍ಟಾಪ್ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ವಿತರಿಸಿ ಮಾತನಾಡಿದ ಅವರು, ಶ್ರೀಮಂತರು ತಮ್ಮ ಮಕ್ಕಳಿಗೆ ಲ್ಯಾಪ್‍ಟಾಪ್ ಕೊಡುವ ಶಕ್ತಿ ಹೊಂದಿದ್ದಾರೆ. ಆದರೆ, ಬಡವರ ಮಕ್ಕಳಿಗೆ ಆ ಶಕ್ತಿ ಇರುವುದಿಲ್ಲ ಹಾಗಾಗಿ ಬಡವರ ಮಕ್ಕಳಿಗೂ ಕೂಡ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಅವರಿಗೂ ಒಳ್ಳೆಯ ಸೌಲಭ್ಯಗಳು ಸಿಗಬೇಕು ಎಂಬ ಕಾರಣಕ್ಕೆ 2016-17ನೇ ಸಾಲಿನ ಬಜೆಟ್‍ನಲ್ಲಿ ಉಚಿತ ಲ್ಯಾಪ್‍ಟಾಪ್ ನೀಡುವ ಘೋಷಣೆ ಮಾಡಿದ್ದೆ. ಆರಂಭದಲ್ಲಿ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ನೀಡಲು ನಿರ್ಧರಿಸಲಾಗಿತ್ತು.
ಈ ಲ್ಯಾಪ್‍ಟಾಪ್‍ನಲ್ಲಿ ಶಿಕ್ಷಣಕ್ಕೆ ಅಗತ್ಯವಾದ ಸಾಫ್ಟ್‍ವೇರ್ ಮತ್ತು ಮಾಹಿತಿಯನ್ನು ಅಳವಡಿಸಲಾಗಿದೆ. ಈ ಸೌಲಭ್ಯವನ್ನು ಬಳಸಿಕೊಂಡು ನೀವು ವ್ಯಾಸಂಗ ಮಾಡುತ್ತಿರುವ ಕೋರ್ಸ್‍ಗಳಲ್ಲಿ ಹೆಚ್ಚಿನ ಸಾಧನೆ ಮಾಡುವಂತೆ ಸಿದ್ದರಾಮಯ್ಯ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಪ್ರತಿಭೆ ಎನ್ನುವುದು ಯಾರೊಬ್ಬರ ಸ್ವತ್ತು ಅಲ್ಲ. ಹುಟ್ಟಿನಿಂದಲೇ ಬುದ್ದಿವಂತಿಕೆ ಬರುವುದಿಲ್ಲ. ಮಕ್ಕಳು ಬೆಳೆಯುವ ವಾತಾವರಣ, ಹಿನ್ನೆಲೆ, ಸನ್ನಿವೇಶಗಳನ್ನು ಆಧರಿಸಿ ಪ್ರತಿಭೆ ಬೆಳೆಯುತ್ತದೆ. ಬಡವರ ಮಕ್ಕಳಿಗೂ ಉತ್ತಮ ಸೌಲಭ್ಯ ಹಾಗೂ ಗುಣಮಟ್ಟದ ಶಿಕ್ಷಣ ಸಿಕ್ಕರೆ ಪ್ರತಿಭಾವಂತರಾಗಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಹೊಸ ವರ್ಷದ ಶುಭಾಶಯ ಹೇಳಿದ ಸಿಎಂ, ಲ್ಯಾಪ್‍ಟಾಪ್‍ಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
Comments