ಕಾಂಗ್ರೆಸ್ ಕುಂಕುಮ ಭಾಗ್ಯಕ್ಕೆ ತಿರುಗೇಟು ಕೊಟ್ಟ ಜೆಡಿಎಸ್ ಮುಖಂಡ

ಎಚ್.ಡಿ.ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾದರೆ ರೈತರ ಪತ್ನಿಯರ ಕುಂಕುಮ ಉಳಿಸುವ ಕಾರ್ಯಕ್ರಮಗಳು ಜಾರಿಯಾಗುತ್ತವೆ ಎಂದು ಜಿಪಂ ಸದಸ್ಯ ಹಾಗೂ ಜೆಡಿಎಸ್ ಮುಖಂಡ ಎ.ಮಂಜು ಕಾಂಗ್ರೆಸ್ ಇತ್ತೀಚೆಗೆ ಹಮ್ಮಿಕೊಂಡಿದ್ದ ಅರಿಶಿನ-ಕುಂಕುಮ ಭಾಗ್ಯ ಕಾರ್ಯಕ್ರಮಕ್ಕೆ ತಿರುಗೇಟು ನೀಡಿದರು.
ಬೈರಮಂಗಲದಲ್ಲಿ ಇತ್ತೀಚೆಗೆ ಕಾಂಗ್ರೆಸ್ ಪ್ರಮುಖರು ಹಮ್ಮಿಕೊಂಡಿದ್ದ ಮಹಿಳೆಯರಿಗೆ ಅರಿಶಿನ-ಕುಂಕುಮ ಭಾಗ್ಯ ಕಾರ್ಯಕ್ರಮಕ್ಕೆ ಅವರು ಹೀಗೆ ಪ್ರತಿಕ್ರಿಯಿಸಿದರು. ಮಹಿಳೆಯರಿಗೆ ಅರಿಶಿನ-ಕುಂಕುಮ ಭಾಗ್ಯದ ಹೆಸರಿನಲ್ಲಿ ಸೀರೆ ವಿತರಿಸಿದ್ದು ಯಾಕೆ ಎಂದು ಕಾಂಗ್ರೆಸ್ಸಿಗರೇ ಪ್ರಶ್ನಿಸಿ ಕೊಳ್ಳಲಿ ಎಂದರು. ಎಚ್.ಡಿ.ಕುಮಾರಸ್ವಾಮಿ ಮುಂದಿನ ಸಿಎಂ ಆದರೆ ರೈತರ ಎಲ್ಲಾ ಸಾಲ ಮನ್ನಾ ಮಾಡುವುದಾಗಿ, ಜೊತೆಗೆ ರೈತರನ್ನು ಸದೃಢ ಮಾಡುವ ಯೋಜನೆಗಳನ್ನು ಜಾರಿ ಮಾಡಲಿದ್ದಾರೆ. ಈ ಮೂಲಕ ರೈತರು ಆತ್ಮಹತ್ಯೆಗೆ ಶರಣಾಗುವುದನ್ನು ತಪ್ಪಿಸುವುದು ಕುಮಾರಸ್ವಾಮಿ ಅವರ ಉದ್ದೇಶ.
ರೈತರ ಪತ್ನಿಯರ ಕುಂಕುಮವನ್ನು ಶಾಶ್ವತವಾಗಿ ಉಳಿಸುವಂತಹ ಯೋಜನೆಗಳು ಇಂದಿನ ಅಗತ್ಯತೆ, ಆದರೆ ಕಾಂಗ್ರೆಸ್ ಸರ್ಕಾರ ಇಂತಹ ಯೋಜನೆಗಳನ್ನು ರೂಪಿಸಲೇ ಇಲ್ಲ, ಕೇವಲ ಸೀರೆ, ಕುಂಕುಮ, ಅರಿಶಿನ ಕೊಟ್ಟರೆ ಸಾಕೆ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ನೂರಾರು ರೈತರು ಆತ್ಮಹತ್ಯೆಗೆ ಶರಣಾಗಿದ್ದರೆ. ಅವರನ್ನು ಉಳಿಸಿಕೊಳ್ಳುವ ಯಾವ ಯೋಜನೆಯೂ ಈ ಸರ್ಕಾರ ರೂಪಿಸಲಿಲ್ಲ. ಅವರ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಬೆಲೆ ಕಲ್ಪಿಸಿಲ್ಲ. ಶಾಶ್ವತ ನೀರಾವರಿ ಯೋಜನೆಗಳು ಜಾರಿಯಾಗಿಲಿಲ್ಲ. ಮಹಿಳೆಯರಿಗೆ ಅರಿಶಿನ-ಕುಂಕುಮ ವಿತರಿಸುವುದರ ಮೂಲಕ ರೈತರನ್ನು ಸದೃಢಗೊಳಿಸಲು ಸಾಧ್ಯವಾಯಿತೆ ಎಂದು ಅವರು ಪ್ರಶ್ನಿಸಿದರು.
Comments