ಮಹದಾಯಿ ಹೋರಾಟಗಾರರ ಮೇಲೆ ಬಿಜೆಪಿ ನಾಯಕರ ದಾಂಧಲೆ

ಮಹದಾಯಿ ವಿಚಾರದಲ್ಲಿ ಆಶ್ವಾಸನೆ ನೀಡಿ, ಕೊಟ್ಟ ಆಶ್ವಾಸನೆಯನ್ನು ಈಡೇರಿಸಲಾಗದೆ ಹೋರಾಟಗಾರರ ಆಕ್ರೋಶಕ್ಕೆ ತುತ್ತಾಗಿದ್ದ ಬಿಜೆಪಿ ಇದೀಗ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ. ಬಿಜೆಪಿ ಕಚೇರಿ ಮುಂದೆ ಮಹದಾಯಿ ಹೋರಾಟಗಾರರ ಮೇಲೆ ಪ್ರತೀಕಾರ ದಾಳಿ ನಡೆಸಿದ ಆರೋಪಕ್ಕೆ ಕೇಸರಿ ಪಡೆ ತುತ್ತಾಗಿದೆ. ಅಷ್ಟೇ ಅಲ್ಲದೆ ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಮಹದಾಯಿ ಹೋರಾಟಗಾರರಿಗೆ ಮತ್ತಷ್ಟು ಕಿಚ್ಚು ಹಚ್ಚುವ ಪ್ರಯತ್ನ ಮಾಡಿದೆ ಎಂದೇ ಹೇಳಬಹುದು.
ಮಹದಾಯಿ ಸಮಸ್ಯೆಗೆ ಪರಿಹಾರ ನೀಡುತ್ತೇವೆ ಎಂಬ ಗೊಡ್ಡು ಆಶ್ವಾಸನೆಯನ್ನು ನೀಡುತ್ತಿದ್ದ ಬಿಜೆಪಿಯ ಅಸಲಿ ಮುಖ ಬಯಲಾಗಿದೆ. 900ನೇ ದಿನಕ್ಕೆ ಮಹದಾಯಿ ಹೋರಾಟ ಕಾಲಿಡ್ತಿರುವ ಸಂದರ್ಭದಲ್ಲಿಯೇ ನರಗುಂದ ರೈತ ಹೋರಾಟ ವೇದಿಕೆಗೆ ನುಗ್ಗಿ ಬಿಜೆಪಿ ನಾಯಕರು ದಾಂಧಲೆ ಎಬ್ಬಿಸಿದ್ದಾರೆ. ಹೋರಾಟದ ನೇತೃತ್ವ ವಹಿಸಿರುವ ವೀರೇಶ್ ಸೊಬರದಮಠ ಮೇಲೆ ಮಾಜಿ ಮಂತ್ರಿ ಸಿಸಿ ಪಾಟೀಲ್ ಬೆಂಬಲಿಗರು ಅಂತಾ ಹೇಳಲಾಗುವ ಕೆಲವರು ಹಲ್ಲೆ ನಡೆಸಿದ್ದಾರೆ. ನರಗುಂದ ಪುರಸಭೆ ಅಧ್ಯಕ್ಷ ಪ್ರಕಾಶ್ ಪಟ್ಟಣಶೆಟ್ಟಿ, ತಾಲೂಕು ಯುವ ಬಿಜೆಪಿ ಅಧ್ಯಕ್ಷ ಅನಿಲ ಧರಿಯಣ್ಣವರ್, ಎಪಿಎಂಸಿ ಅಧ್ಯಕ್ಷ ನಾಗಲಿಂಗರೆಡ್ಡಿ ಮೇಟಿ, ಗೋವಿಂದರೆಡ್ಡಿ ಸಿದ್ದನಾಳ ಸೇರಿದಂತೆ ಬಿಜೆಪಿಯ 20ಕ್ಕೂ ಹೆಚ್ಚು ಮಂದಿ ಹೋರಾಟಗಾರರ ಮೇಲೆ ಹಲ್ಲೆ ನಡೆಸಿ ಎಳೆದಾಡಿದ್ದಾರೆ.
ಪಕ್ಷಾತೀತ ಹೋರಾಟವೆಂದು ಹೇಳಿಕೊಂಡು ಬಿಜೆಪಿ ವಿರುದ್ಧ ಹೋರಾಟ ಮಾಡ್ತಿದ್ದೀರಾ..? ಕಾಂಗ್ರೆಸ್‍ನವರಿಂದ ಹಣ ಪಡೆದು ಬಿಜೆಪಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದೀರಾ ಅಂತಾ ಬಿಜೆಪಿಯವರು ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿ ಗೂಂಡಾಗಿರಿಗೆ ಮಹದಾಯಿ ಹೋರಾಟಗಾರರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಸಿಸಿ ಪಾಟೀಲ್ ಬೆಂಬಲಿಗರೇ ಈ ಕೃತ್ಯ ಎಸಗಿದ್ದು, ವೇದಿಕೆ ಕಿತ್ತೊಗೆಯುವುದಾಗಿ ಡಿಸೆಂಬರ್ 3ರಂದು ಬಹಿರಂಗ ಹೇಳಿಕೆ ನೀಡಿದ್ರು ಅಂತಾ ಶಂಕರ್ ಅಂಬಲಿ ಆರೋಪಿಸಿದ್ದಾರೆ. ಈ ಒಂದು ಯಡವಟ್ಟಿನಿಂದ ಬಿಜೆಪಿ ಮುಂದಿನ ಚುನಾವಣೆಯಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹೋರಾಟಗಾರರ ಮೇಲೆ ಹಲ್ಲೆ ನಡೆಸಿದವರನ್ನು ಪೊಲೀಸರು ಕೂಡಲೇ ಬಂಧಿಸಬೇಕು. ಇಲ್ಲದೇ ಹೋದ್ರೆ ರೈತರು ಕಾನೂನನ್ನು ಕೈಗೆ ತೆಗೆದುಕೊಳ್ಳುವ ಪ್ರಸಂಗ ಬರುತ್ತೆ ಅಂತಾ ಮಹದಾಯಿ ಹೋರಾಟಗಾರರು ಎಚ್ಚರಿಸಿದ್ದಾರೆ.
Comments