ಚನ್ನಪಟ್ಟಣದಲ್ಲಿ ಬಿಜೆಪಿ ಯಾವುದೇ ಕಾರಣಕ್ಕೂ ಗೆಲ್ಲುವುದಿಲ್ಲ : ಡಿಕೆಶಿ

ಚನ್ನಪಟ್ಟಣದಲ್ಲಿ ಬಿಜೆಪಿ ಯಾವುದೇ ಕಾರಣಕ್ಕೂ ಗೆಲ್ಲುವುದಿಲ್ಲ. ಬೇಕಾದರೆ ನಾನು ಬಾಜಿ ಕಟ್ಟುತ್ತೇನೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಸವಾಲು ಹಾಕಿದರು. ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಲಿನ ಶಾಸಕರು ಮಾಡುವ ರೀತಿ ರಾಜಕಾರಣ ನಾವು ಮಾಡುವುದಿಲ್ಲ. ನಾವು ಅಭಿವೃದ್ಧಿ ರಾಜಕಾರಣ ಮಾಡುತ್ತೇವೆ. ಅಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಗೆಲ್ಲಲು ಸಾಧ್ಯವೇ ಇಲ್ಲಎಂದು ಹೇಳಿದರು.
ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮಗಳನ್ನು ನೆರವೇರಿಸಲು ಚನ್ನಪಟ್ಟಣಕ್ಕೆ ಆಗಮಿಸುತ್ತಿದ್ದರೆ, ರಾಮನಗರ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳಿಗೆ ಅತಿ ಹೆಚ್ಚು ಅನುದಾನ ನೀಡಿದ್ದಾರೆ. ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ನೆರವೇರಿಸಲಾಗಿದೆ ಎಂದು ಡಿಕೆಶಿ ಹೇಳಿದರು. ಶೃಂಗೇರಿಗೂ ನೆಹರು ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ರಾಜೀವ್‍ಗಾಂಧಿಯವರು ಶೃಂಗೇರಿಗೆ ಪದೇ ಪದೇ ಬರುತ್ತಿದ್ದರು. ರಾಹುಲ್‍ಗಾಂಧಿಯವರು ಶೃಂಗೇರಿಗೆ ಭೇಟಿ ಕೊಡುತ್ತಿರುವುದರಲ್ಲಿ ವಿಶೇಷವೇನೂ ಇಲ್ಲ. ಅವರ ಕುಟುಂಬದವರು ಮೊದಲಿನಿಂದಲೂ ಆ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಈಗ ರಾಹುಲ್‍ಗಾಂಧಿಯವರು ಬರುತ್ತಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಡಿ.ಕೆ.ಶಿವಕುಮಾರ್ ಉತ್ತರಿಸಿದರು.
ಕೂಡ್ಲಿಗಿ ಕ್ಷೇತ್ರದ ಶಾಸಕ ನಾಗೇಂದ್ರ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಸಂತೋಷದ ವಿಷಯ. ಅವರು ಕಾಂಗ್ರೆಸ್ ಸೇರಿದರೆ ನಮ್ಮ ಶಕ್ತಿ ಹೆಚ್ಚುತ್ತದೆ. ಅವರು ನನಗೆ ಹೆಚ್ಚು ಆತ್ಮೀಯರು ಎಂದು ಹೇಳಿದರು. 2018ರ ವಿಧಾನಸಭೆ ಚುನಾವಣೆಯಲ್ಲಿ ನಾವೇ ಅಧಿಕಾರಕ್ಕೆ ಬರುವುದು. ಇದರಲ್ಲಿ ಯಾವುದೇ ಅನುಮಾನ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರ್ವೆ ಮಾಡಿಸಿದ್ದಾರೆ. ಅದೇ ರೀತಿ ಪಕ್ಷದ ವತಿಯಿಂದಲೂ ಮಾಡಿಸಿರುವ ಸರ್ವೆಯಲ್ಲೂ ನಮ್ಮ ಪರವಾದ ಒಲವಿದೆ. ಹಾಗಾಗಿ ನಾವು ಅಧಿಕಾರಕ್ಕೆ ಬರುವುದು ಖಚಿತ ಎಂದು ಹೇಳಿದರು.
Comments