ಹಗರಿಬೊಮ್ಮನಹಳ್ಳಿ ಶಾಸಕನನ್ನು ಮಣಿಸಲು ಜೆಡಿಎಸ್ ನಿಂದ ಮಾಸ್ಟರ್ ಪ್ಲಾನ್

ಚುನಾವಣೆಗೆ ನಾಲ್ಕೈದು ತಿಂಗಳ ಪೂರ್ವದಲ್ಲೇ ರಾಜ್ಯ ರಾಜಕಾರಣದಲ್ಲಿ ಮಹತ್ತರ ಬೆಳವಣಿಗೆಗಳು ನಡೆಯುತ್ತಿವೆ. ಇದಕ್ಕೆ ಬಳ್ಳಾರಿ ಜಿಲ್ಲೆ ಹೊರತಾಗಿಲ್ಲ. ಒಂದೆಡೆ ರೆಡ್ಡಿ ಪಾಳೆಯದಲ್ಲಿ ಗುರುತಿಸಿಕೊಂಡಿದ್ದ ಕೂಡ್ಲಿಗಿ ಶಾಸಕ ನಾಗೇಂದ್ರ ಕಾಂಗ್ರೆಸ್ ಸೇರಲು ಸಜ್ಜಾಗಿದ್ದರೆ, ಮತ್ತೊಂದು ಮಾಜಿ ಅಧಿಕಾರಿಯೋರ್ವ ಹಗರಿಬೊಮ್ಮನಹಳ್ಳಿ ಶಾಸಕನ ಮಣಿಸಲು ಪಣ ತೊಟ್ಟಿದ್ದಾರೆ.
ಹೌದು.., ಜೆಡಿಎಸ್ ಪಕ್ಷದಿಂದ ಆಯ್ಕೆಯಾಗಿ ಈಗ ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜಂಪ್ ಆಗುತ್ತಿರುವ ಹಗರಿಬೊಮ್ಮಹಳ್ಳಿ ಶಾಸಕ ಭೀಮಾನಾಯ್ಕ ವಿರುದ್ಧ ಜೆಡಿಎಸ್‍ನಿಂದಲೇ ಸೆಡ್ಡು ಹೊಡೆಯಲು ಸರ್ಕಾರಿ ಕೆಲಸಕ್ಕೆ ಗುಡ್ ಬೈ ಹೇಳಿ ಬಂದಿದ್ದೇನೆ ಎಂದು ಮಾಜಿ ಕೃಷಿ ಅಧಿಕಾರಿ ಡಾ. ತಿಪ್ಪೇಸ್ವಾಮಿ ವೆಂಕಟೇಶ್ ತಿಳಿಸಿದ್ದಾರೆ.
ಈ ಕ್ಷೇತ್ರದ ಪಕ್ಕದಲ್ಲಿನ ಜಗಳೂರು ತಾಲೂಕಿನ ಮುಷ್ಟೂರು ಗ್ರಾಮದವರಾದ ತಿಪ್ಪೇಸ್ವಾಮಿ ಬೋವಿ ಸಮಾಜಕ್ಕೆ ಸೇರಿದವರಾಗಿದ್ದು, ಕೃಷಿ, ಎಂಬಿಎ ಪದವಿ ಮುಗಿಸಿದ ತಕ್ಷಣ ಕೊಟ್ಟೂರಿನಲ್ಲಿ ಮನೆ ಮಾಡಿಕೊಂಡು ಕೃಷಿ ಅಧಿಕಾರಿಯಾಗಿ ಸೇವೆ ಆರಂಭಿಸಿದ್ದರು. ನಂತರ ಬೆಂಗಳೂರು ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿ, ಸಾರಿಗೆ ಇಲಾಖೆ, ಕೊನೆಯಲ್ಲಿ ಜಿಲ್ಲೆಯ ಸಂಡೂರು ಸೇರಿದಂತೆ ಹಲವು ಕಡೆ ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಆದರೆ ಅಲ್ಲಿನ ವ್ಯವಸ್ಥೆ ಸರಿ ಕಾಣದೆ ಕಳೆದ ಅಗಸ್ಟ್ 31 ರಂದು ಸರ್ಕಾರಿ ಸೇವೆಗೆ ಗುಡ್ ಬೈ ಹೇಳಿ ಈಗ ಶಾಸಕರಾಗಿ ಜನ ಸೇವೆಗೆ ಮುಂದಾಗಿದ್ದಾರೆ. ಈಗಾಗಲೇ ಕ್ಷೇತ್ರದ ಬಹುತೇಖ ಹಳ್ಳಿಗಳಲ್ಲಿ ಮೂರು ಸುತ್ತಿನ ಪ್ರಚಾರ ಮುಗಿಸಿದ್ದಾರೆ. ಎರಡು ಫೇಸ್‌ಬುಕ್ ಮತ್ತು ಹಲವಾರು ವಾಟ್ಸ್‌ಪ್ ಗುಂಪುಗಳ ಮೂಲಕ ವಿದ್ಯಾವಂತ ಜನರನ್ನು ತಲುಪಲು ಡಾ. ತಿಪ್ಪೇಸ್ವಾಮಿ ಪ್ರಯತ್ನಿಸಿದ್ದಾರೆ.
ಹಗರಿಬೊಮ್ಮಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕ್ಷೇತ್ರದಾದ್ಯಂತ ಜೆಡಿಎಸ್ ಪಕ್ಷ ಇನ್ನೂ ಭದ್ರವಾಗಿಯೇ ಇದೆ. ಈ ಪಕ್ಷದಿಂದ ಆಯ್ಕೆಯಾಗಿ ಕಾಂಗ್ರೆಸ್‍ಗೆ ಜಂಪ್ ಆಗಿರುವ ಪಕ್ಷ ದ್ರೋಹಿ ಶಾಸಕ ಭೀಮಾನಾಯ್ಕ್ ಅವರನ್ನು ಹಗರಿ ಬೊಮ್ಮನಹಳ್ಳಿಯಲ್ಲಿಯೇ ಸೋಲಿಸುವುದೇ ಗುರಿಯಾಗಿದೆ. ಭೀಮಾನಾಯ್ಕ್ ಅವರನ್ನು ಸೋಲಿಸುವಂತೆ ಪಕ್ಷದ ವರಿಷ್ಠ ಹೆಚ್.ಡಿ. ದೇವೇಗೌಡರು ಮತ್ತು ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ನಮಗೆ ಪ್ರಮಾಣ ಮಾಡಿ ಕಳುಹಿಸಿದ್ದಾರೆ. ನಮ್ಮ ಪಕ್ಷದ ಮೇಲೆ ಅಭಿಮಾನ, ಬದ್ಧತೆ ಇಟ್ಟುಕೊಂಡಿರುವ ಕಾರ್ಯಕರ್ತರ ಪಡೆ, ಪ್ರಜ್ಞಾವಂತ ಮತದಾರರು ಇದ್ದಾರೆ ಎಂದು ತಿಪ್ಪೇಸ್ವಾಮಿ ಭರವಸೆಯ ಮಾತುಗಳನ್ನಾಡಿದ್ದಾರೆ.
Comments