ಕಾಂಗ್ರೆಸ್ ಶಾಸಕರಿಂದ ಸ್ವಚ್ಛ ಭಾರತ ಅಭಿಯಾನದ 109 ಕೋಟಿ ಗುಳುಂ ಸ್ವಾಹ
ಸ್ವಚ್ಛ ಭಾರತ ಅಭಿಯಾನದ 109 ಕೋಟಿ ರೂ. ಅನುದಾನವನ್ನು ಕಾಂಗ್ರೆಸ್‍ನ ಕೆಲ ಸಚಿವರು ಮತ್ತು ಶಾಸಕರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಅವರು ಜನಪ್ರತಿನಿಧಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸಿಬಿಐ, ಎಸಿಬಿ ಮತ್ತು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದಾರೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಸ್ವಚ್ಛ ಭಾರತ ಅಭಿಯಾನದ ಅನುದಾನವನ್ನು ಶೌಚಾಲಯಗಳ ನಿರ್ಮಾಣ, ಜೈವಿಕ ಅನಿಲ ಘಟಕಗಳ ನಿರ್ವಹಣೆ ಮತ್ತು ತ್ಯಾಜ್ಯ ಸಂಸ್ಕರಣಾ ಘಟಕಗಳ ಸುತ್ತಮುತ್ತಲ ಮೂಲಭೂತ ಸೌಲಭ್ಯ ಯೋಜನೆಗಳಿಗೆ ಮಾತ್ರ ಬಳಸಿಕೊಳ್ಳಬಹುದಾಗಿದೆ. ಆದರೆ, ಕೆಲ ಪ್ರಭಾವಿ ಸಚಿವರು ಮತ್ತು ಕಾಂಗ್ರೆಸ್ ಶಾಸಕರ ಒತ್ತಡಕ್ಕೆ ಮಣಿದಿರುವ ಪಾಲಿಕೆ ಅಧಿಕಾರಿಗಳು ಸ್ವಚ್ಛ ಭಾರತ ಅಭಿಯಾನದ ಅನುದಾನವನ್ನು ಬೇರೆ ಕಾಮಗಾರಿಗಳಿಗೆ ಬಿಡುಗಡೆ ಮಾಡಿದ್ದಾರೆ ಎಂದು ಎನ್.ಆರ್.ರಮೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿದರು.
ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಸಚಿವರಾದ ಕೃಷ್ಣಭೈರೇಗೌಡ, ಶಾಸಕರಾದ ಹ್ಯಾರಿಸ್, ಎಸ್.ಟಿ.ಸೋಮಶೇಖರ್, ದಿನೇಶ್ ಗುಂಡೂರಾವ್, ಭೈರತಿ ಬಸವರಾಜ್, ಜಮೀರ್ ಅಹಮ್ಮದ್‍ಖಾನ್ ಮತ್ತು ಪಾಲಿಕೆ ಆರೋಗ್ಯ ವಿಭಾಗದ ಜಂಟಿ ಆಯುಕ್ತರು, ಎಸ್‍ಡಬ್ಲ್ಯೂಎಂ ಮುಖ್ಯ ಅಭಿಯಂತರರು, ಘನತ್ಯಾಜ್ಯ ವಿಲೇವಾರಿ ಇಲಾಖೆಯ ಅಧಿಕಾರಿಗಳು ಮತ್ತಿತರರ ವಿರುದ್ಧ ಸಿಬಿಐ, ಎಸಿಬಿ ಮತ್ತು ಲೋಕಾಯುಕ್ತದಲ್ಲಿ ದೂರು ದಾಖಲಿಸಿದ್ದೇನೆ ಎಂದರು.
Comments