ಮೋದಿ -ಶಾ ಗೆ ಬಿಗ್ ಶಾಕ್...!!
ಮೊನ್ನೆ, ಮೊನ್ನೆಯಷ್ಟೇ ಅಧಿಕಾರಕ್ಕೆ ಬಂದಿದ್ದ ಬಿ.ಜೆ.ಪಿ.ಯಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ತವರು ರಾಜ್ಯದಲ್ಲಿ ಪ್ರಯಾಸದಿಂದ ಅಧಿಕಾರಕ್ಕೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ, ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ತಲೆನೋವು ಶುರುವಾಗಿದೆ. ಗುಜರಾತ್ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ, ಉಪ ಮುಖ್ಯಮಂತ್ರಿಯಾಗಿ ನಿತಿನ್ ಪಟೇಲ್ ಹಾಗೂ 20 ಮಂದಿ ಸಚಿವರು ಇತ್ತೀಚೆಗಷ್ಟೇ ಪ್ರಮಾಣ ವಚನ ಸ್ವೀಕರಿಸಿದ್ದರು. ಆದರೆ, ಖಾತೆಗಳ ಹಂಚಿಕೆಯ ಬಳಿಕ ತಗಾದೆ ಶುರುವಾಗಿದೆ.
ಹಿಂದಿನ ಅವಧಿಯಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ನಿತಿನ್ ಪಟೇಲ್ ಅವರಿಗೆ ಹಣಕಾಸು, ನಗರಾಭಿವೃದ್ಧಿ ಮತ್ತು ಪೆಟ್ರೋಲಿಯಂ ಖಾತೆಗಳನ್ನು ನೀಡಲಾಗಿತ್ತು. ಈ ಬಾರಿ ಅವರಿಗೆ ಪ್ರಮುಖ ಖಾತೆಗಳನ್ನು ನೀಡಿಲ್ಲ. ಹಣಕಾಸು ಖಾತೆಯನ್ನು ಕಿರಿಯ ಸಹೋದ್ಯೋಗಿ ಸೌರಭ್ ಪಟೇಲ್ ಅವರಿಗೆ ನೀಡಲಾಗಿದೆ. ನಗರಾಭಿವೃದ್ಧಿ ಮತ್ತು ಪೆಟ್ರೋಲಿಯಂ ಖಾತೆಗಳನ್ನು ಮುಖ್ಯಮಂತ್ರಿ ವಿಜಯ್ ರೂಪಾನಿ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ಇದರಿಂದಾಗಿ ಅಸಮಾಧಾನಗೊಂಡಿರುವ ನಿತಿನ್ ಪಟೇಲ್ ಸಚಿವಾಲಯಕ್ಕೆ ಆಗಮಿಸಿ ಅಧಿಕಾರ ವಹಿಸಿಕೊಂಡಿಲ್ಲ. ಭದ್ರತೆಯನ್ನೂ ಪಡೆದುಕೊಳ್ಳದೇ ಖಾಸಗಿ ಕಾರಿನಲ್ಲೇ ಓಡಾಟ ನಡೆಸಿದ್ದಾರೆ.
ಪಕ್ಷದ ವರಿಷ್ಠರ ವಿರುದ್ಧ ಅಸಮಾಧಾನ ಹೊರಹಾಕಿರುವ ನಿತಿನ್ ಪಟೇಲ್, ಗುಜರಾತ್ ಬಿ.ಜೆ.ಪಿ.ಯಲ್ಲಿ ಹಿರಿಯ ನಾಯಕನಾದ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಹೇಳಿದ್ದು, ರಾಜೀನಾಮೆಗೂ ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ, ಇದನ್ನು ಗುಜರಾತ್ ಬಿ.ಜೆ.ಪಿ. ಅಧ್ಯಕ್ಷ ಜಿತು ವಾಘನಿ ನಿರಾಕರಿಸಿದ್ದಾರೆ. ಸಂಪುಟದಲ್ಲಿ ಯಾವುದೇ ಅಸಮಾಧಾನವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನಿತಿನ್ ಪಟೇಲ್ ಅಸಮಾಧಾನದ ವಿಷಯ ಮೋದಿ ಮತ್ತು ಅಮಿತ್ ಶಾ ಅವರಿಗೆ ತಲೆನೋವಾಗಿದ್ದು, ನಿತಿನ್ ಪಟೇಲ್ ಅವರನ್ನು ಸಮಾಧಾನಪಡಿಸಲು ಮುಂದಾಗಿದ್ದಾರೆ.
Comments