ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಬಗ್ಗೆ ಜನರಿಗೆ ಒಲವಿರೋದು ಕನ್ಫರ್ಮ್

ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಜನಸಾಮಾನ್ಯರ ಬದುಕು ಹಸನಾಗಿಲ್ಲ. ಈ ಹಿನ್ನೆಲೆ ಪ್ರಸಕ್ತ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಬಗ್ಗೆ ಜನರ ಒಲವಿದ್ದು, ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಜೆಡಿಎಸ್ ಮುಖಂಡ ಬಿ.ಎ. ಜೀವಿಜಯ ಕರೆ ನೀಡಿದರು.
ಸಮೀಪದ ಮಾದಾಪುರ ವಿಎಸ್‍ಎಸ್‍ಎನ್ ಸಭಾಂಗಣದಲ್ಲಿ ನಡೆದ ಜೆಡಿಎಸ್ ಹೋಬಳಿ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಕೇವಲ ಘೋಷಣೆಗಷ್ಟೇ ಸೀಮಿತವಾಗಿದ್ದು, ಅರ್ಹರಿಗೆ ಯೋಜನೆಯ ಪ್ರಯೋಜನ ಸಿಗುತ್ತಿಲ್ಲ. ಆಡಳಿತ ಯಂತ್ರ ನಿಷ್ಕ್ರೀಯವಾಗಿದ್ದರೂ ಸರ್ಕಾರಗಳು ಗಮನಹರಿಸುತ್ತಿಲ್ಲ ಎಂದು ಆರೋಪಿಸಿದರು. ಕೇಂದ್ರ ಸರ್ಕಾರದ ನೋಟ್ ಬ್ಯಾನ್ ಕ್ರಮ ಯಶಸ್ವಿಯಾಗಿಲ್ಲ. ಆರ್ಥಿಕ ಸ್ಥಿರತೆ, ಅಭಿವೃದ್ಧಿಯನ್ನು ಕಾಯ್ದುಕೊಳ್ಳುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ದೇಶ ಮತ್ತು ರಾಜ್ಯದಲ್ಲಿ ದಲಿತರು, ಬಡವರು, ರೈತರು, ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ ಎಂದು ಜೀವಿಜಯ ಆಕ್ಷೇಪಿಸಿದರು.
ಸಭೆಯಲ್ಲಿ ಪಕ್ಷದ ಪರಿಶಿಷ್ಟ ಜಾತಿ-ಪಂಗಡ ಘಟಕದ ರಾಜ್ಯ ಉಪಾಧ್ಯಕ್ಷ ರಾಜಾರಾವ್, ಯುವ ಜೆಡಿಎಸ್ ಅಧ್ಯಕ್ಷ ಸಿ.ಎಲ್. ವಿಶ್ವ, ವೀರಾಜಪೇಟೆ ಕ್ಷೇತ್ರ ಸಮಿತಿ ಅಧ್ಯಕ್ಷ ಎಸ್.ಹೆಚ್. ಮತೀನ್, ಪ್ರಮುಖರಾದ ಮನೋಜ್ ಬೋಪಯ್ಯ, ಹಿಂದುಳಿದ ಘಟಕದ ಅಧ್ಯಕ್ಷ ಶಿವದಾಸ್, ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಡಿಸಿಲ್ವಾ, ಮುಖಂಡರಾದ ಪರಮೇಶ್, ಅಬ್ದುಲ್ ರೆಹಮಾನ್, ಗ್ರಾ.ಪಂ. ಸದಸ್ಯ ಪ್ರಸನ್ನಕುಮಾರ್, ಗಪ್ಪು ಬೆಳ್ಯಪ್ಪ, ಐಗೂರು ಗ್ರಾ.ಪಂ. ಅಧ್ಯಕ್ಷ ಚಂಗಪ್ಪ, ಡಿ.ಎಂ. ಪೂವಯ್ಯ, ಎನ್.ಸಿ. ಉತ್ತಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇದೇ ಸಂದರ್ಭ ಮಾದಾಪುರ ಹೋಬಳಿ ಜೆಡಿಎಸ್ ಘಟಕದ ಅಧ್ಯಕ್ಷರನ್ನಾಗಿ ಮುಕ್ಕಾಟಿರ ಎಂ. ಬೆಳ್ಯಪ್ಪ, ಪ್ರಧಾನ ಕಾರ್ಯದರ್ಶಿಯನ್ನಾಗಿ ವಿ.ಕೆ. ಗಣೇಶ್, ಸ್ಥಾನೀಯ ಸಮಿತಿ ಅಧ್ಯಕ್ಷರಾಗಿ ಮುಸ್ತಫ ಸೀದಿ, ಉಪಾಧ್ಯಕ್ಷರಾಗಿ ಎಂ.ಜಿ. ಶಿವ, ಕಾರ್ಯದರ್ಶಿಯಾಗಿ ಮುತಾಲಿಪ್, ಕೆ.ಎಸ್. ಶ್ರೀಜಿತ್, ಮಹಿಳಾ ಘಟಕದ ಅಧ್ಯಕ್ಷೆಯಾಗಿ ತಂಗಮಣಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರನ್ನಾಗಿ ಎಂ.ಎಂ. ಖಾಸಿಂ, ಉಪಾಧ್ಯಕ್ಷರಾಗಿ ಲೂಯಿಸ್ ಡಿಸೋಜ, ಯುವ ಜೆಡಿಎಸ್ ಅಧ್ಯಕ್ಷರಾಗಿ ಹೆಚ್.ಎಂ. ವಿಕ್ರಂ, ಪ.ಪಂಗಡ ಘಟಕಕ್ಕೆ ರಾಜೇಶ್, ತಾಲೂಕು ಸಮಿತಿ ಸದಸ್ಯರನ್ನಾಗಿ ಸಾಫಿಯಾ ಅವರುಗಳನ್ನು ನೇಮಕಗೊಳಿಸಲಾಯಿತು.
Comments