ಶೀಘ್ರದಲ್ಲೇ ಯಡಿಯೂರಪ್ಪ ಕ್ಯಾಂಟೀನ್ ಆರಂಭ
ತಮಿಳುನಾಡಿನಲ್ಲಿ ಅಮ್ಮ ಕ್ಯಾಂಟೀನ್ ಜನಪ್ರಿಯವಾಗಿದ್ದು, ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿದೆ. ಜೆ.ಡಿ.ಎಸ್. ಮುಖಂಡ ಶರವಣ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೆಸರಲ್ಲಿ ಅಪ್ಪಾಜಿ ಕ್ಯಾಂಟೀನ್ ಆರಂಭಿಸಿದ್ದಾರೆ. ಇದೇ ರೀತಿ ಮಂಡ್ಯದಲ್ಲಿ ಮಾಜಿ ಸಂಸದೆ, ನಟಿ ರಮ್ಯಾ ಅವರ ಅಭಿಮಾನಿ ರಮ್ಯಾ ಕ್ಯಾಂಟೀನ್ ಆರಂಭಿಸಿದ್ದಾರೆ.
ಈ ಕ್ಯಾಂಟೀನ್ ಗಳಲ್ಲಿ ಕಡಿಮೆ ಬೆಲೆಗೆ ತಿಂಡಿ, ಊಟ ನೀಡಲಾಗುತ್ತಿದ್ದು, ಜನಸಾಮಾನ್ಯರಿಗೆ ಅನುಕೂಲವಾಗಿದೆ. ಇದಾದ ಬಳಿಕ ಮಂಡ್ಯದಲ್ಲಿ ಬಿ.ಜೆ.ಪಿ. ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೆಸರಲ್ಲಿ ಕ್ಯಾಂಟೀನ್ ಆರಂಭಿಸಲಾಗ್ತಿದೆ. ಮಂಡ್ಯ ಯಡಿಯೂರಪ್ಪ ಅಭಿಮಾನಿಗಳ ಸಂಘದ ಮಳವಳ್ಳಿ ತಾಲ್ಲೂಕು ಕಿರುಗಾವಲು ಗ್ರಾಮದ ಮಹದೇವು ಅವರು, ಬಿ.ಎಸ್.ವೈ. ಹೆಸರಲ್ಲಿ ಕ್ಯಾಂಟೀನ್ ಆರಂಭಿಸುತ್ತಿದ್ದು, 5 ರೂ.ಗೆ ಊಟ, ತಿಂಡಿ ನೀಡಲು ಮುಂದಾಗಿದ್ದಾರೆ. ಮಂಡ್ಯ ಸುಭಾಷ್ ನಗರದ 1 ನೇ ಕ್ರಾಸ್ ನಲ್ಲಿ ಬಿ.ಎಸ್.ವೈ. ಕ್ಯಾಂಟೀನ್ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
Comments