ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಲೆಕ್ಕಾಚಾರ ..?
ಕಾಂಗ್ರೆಸ್ ಮುಕ್ತ ಮಾಡುವುದಾಗಿ ಬಿಜೆಪಿ ನಾಯಕರು ಹೇಳುತ್ತಿದ್ದರಾದರೂ ವಾಸ್ತವ ಪರಿಸ್ಥಿತಿ ಅಷ್ಟು ಸರಳವಾಗಿಲ್ಲ. ಹೀಗಾಗಿ ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ಲೆಕ್ಕಾಚಾರ ಹಾಕಿದೆ. ಹೇಳಿಕೇಳಿ ಸಿದ್ದರಾಮಯ್ಯ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಮಿಷನ್ 150 ಮೂಲಕ ಅಧಿಕಾರ ಹಿಡಿಯಲು ಹೊರಟಿದ್ದ ಬಿಜೆಪಿಗೆ ಚುನಾವಣಾ ಮುನ್ನವೇ ಸಾಕಷ್ಟು ರಾಜಕೀಯ ಹಿನ್ನಡೆಯಾಗುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಮಹದಾಯಿ ನದಿ ನೀರು ಹಂಚಿಕೆ ವಿವಾದ, ಪ್ರತ್ಯೇಕ ಲಿಂಗಾಯಿತ ಧರ್ಮ, ನಾಯಕರ ಒಳಜಗಳ, ಗುಂಪುಗಾರಿಕೆ ಇತ್ಯಾದಿ ಕಾರಣಗಳಿಂದ ಬಿಜೆಪಿಯ ಕಮಲ ವಿಲವಿಲ ಎನ್ನುವಂತಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಬಿಜೆಪಿಯನ್ನು ದಡ ಸೇರಿಸುವ ಲಕ್ಷಣಗಳು ಗೋಚರಿಸುತ್ತಿಲ್ಲ. ಕಾಂಗ್ರೆಸ್ ದಿನದಿಂದ ದಿನಕ್ಕೆ ಪ್ರಾಬಲ್ಯ ಸಾಧಿಸುತ್ತಿರುವುದು ಕಮಲ ನಾಯಕರನ್ನು ನಿದ್ದೆಗೆಡುವಂತೆ ಮಾಡಿದೆ. ಹಾಗೆ ನೋಡಿದರೆ ಯಡಿಯೂರಪ್ಪನವರಿಗಿಂತಲೂ ಜೆಡಿಎಸ್ ಸಿದ್ದರಾಮಯ್ಯ ವಿರುದ್ದವೇ ತೊಡೆ ತಟ್ಟಿದೆ. ಇನ್ನೊಂದು ಅವಧಿಗೆ ಅವರು ಮುಖ್ಯಮಂತ್ರಿಯಾದರೆ ಜೆಡಿಎಸ್ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ ಎಂಬುದು ದಳಪತಿಗಳ ಆತಂಕ. ತಮ್ಮ ಪಕ್ಷದ ಏಳು ಶಾಸಕರನ್ನು ಹೈಜಾಕ್ ಮಾಡಿರುವ ಸಿದ್ದರಾಮಯ್ಯನವರಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಖೆಡ್ಡ ತೋಡಲು ದೇವೇಗೌಡರು ಮತ್ತು ಕುಮಾರಸ್ವಾಮಿ ತಮ್ಮದೇ ಆದ ರಣತಂತ್ರ ರೂಪಿಸಿದ್ದಾರೆ. ಹೀಗೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್, ಬಿಜೆಪಿ ಪುನಃ ದೋಸ್ತಿಯಾಗಲು ತೆರೆಮರೆಯಲ್ಲಿ ವೇದಿಕೆಯನ್ನು ಸಿದ್ದಪಡಿಸಿಕೊಳ್ಳುತ್ತಿವೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಹಬ್ಬಿದೆ.
Comments