ರೈತರ ಸಾಲಮನ್ನಾ ಮಾಡಲಿರುವ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತನ್ನಿ : ಎನ್.ಎಚ್ ಕೋನರೆಡ್ಡಿ

'ಮಹದಾಯಿ ಜಲ ವಿವಾದಕ್ಕೆ ಜಾರಿಗೆ ಸ್ಪಂದಿಸದ ಬಿಜೆಪಿಯವರನ್ನು ಮನೆಗೆ ಕಳುಹಿಸಿ. ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಘೋಷಿಸಿರುವ ಜೆಡಿಎಸ್ ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತನ್ನಿ' ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.
'ಮಹದಾಯಿ ಕಳಸಾ ಬಂಡೂರಿ ತಿರುವು ಯೋಜನೆಯನ್ನು ಜಾರಿ ಮಾಡಿಯೇ ತೀರುತ್ತೇವೆ ಎಂದು ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದರು. ಅಲ್ಲದೆ, ಪರಿವರ್ತನಾ ಯಾತ್ರೆಯಲ್ಲಿ ಉತ್ತರ ಕರ್ನಾಟಕ ಭಾಗದ ರೈತರಿಗೆ ಸಿಹಿ ಸುದ್ದಿ ನೀಡುವುದಾಗಿ ಭರವಸೆ ನೀಡಿದ್ದರು. ಯೋಜನೆ ಜಾರಿಯಾಗುತ್ತದೆಂದು ಸಮಸ್ತ ರೈತರು ಸೇರಿದಂತೆ ನನಗೂ ಸಂತಸವಾಗಿತ್ತು. ಆದರೆ, ಸಹಸ್ರಾರು ಜನರ ಮುಂದೆ ಯಾವುದೇ ಆದೇಶ ಪ್ರಕಟಿಸದೇ ಮೋಸ ಮಾಡಿದರು' ಎಂದು ಶಾಸಕ ಎನ್.ಎಚ್. ಕೋನರಡ್ಡಿ ದೂರಿದರು.'ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರು ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿಗೆ ಅವರು ಪತ್ರ ಬರೆಯಬೇಕಿತ್ತು. ಸಿದ್ದರಾಮಯ್ಯ ಅವರು ಬರೆದಿರುವ ಪತ್ರಕ್ಕೆ ಇನ್ನೂ ಉತ್ತರ ನೀಡಿಲ್ಲ. ಇದು ಸರಿಯಲ್ಲ' ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.
'ಕುಡಿಯುವ ನೀರಿನ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜಕೀಯ ಮಾಡುವುದು ಸರಿಯಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಮನಸ್ಸು ಮಾಡಿದರೆ ಒಂದು ಕ್ಷಣದಲ್ಲಿ ಮಹದಾಯಿ ನದಿ ನೀರು ಹಂಚಿಕೆ ಸಮಸ್ಯೆ ಬಗೆಹರಿಯಲಿದೆ' ಎಂದು ಹೇಳಿದರು. ಜೆಡಿಎಸ್ ರಾಜ್ಯ ರೈತ ವಿಭಾಗದ ಅಧ್ಯಕ್ಷ ಗಂಗಾಧರ ಪಾಟೀಲ ಕುಲಕರ್ಣಿ ಮಾತನಾಡಿ 'ರೈತ ಪರವಾದ ಡಾ.ಸ್ವಾಮಿನಾಥನ್ ಆಯೋಗದ ವರದಿ ಇನ್ನೂ ಜಾರಿಯಾಗಿಲ್ಲ. ಅದನ್ನು ಯಥಾವತ್ತಾಗಿ ಜಾರಿ ಮಾಡಬೇಕು. ವರದಿ ಜಾರಿ ಮಾಡುವುದಾಗಿ ಪ್ರಧಾನಿ ಮೋದಿ ಚುನಾವಣೆ ಪೂರ್ವದಲ್ಲಿ ಘೋಷಣೆ ಮಾಡಿದ್ದರು. ಆದರೆ, ಅವರು ಮಾತಿನಂತೆ ನಡೆದುಕೊಂಡಿಲ್ಲ' ಎಂದು ಟೀಕಿಸಿದರು. 'ರೈತ, ಗ್ರಾಹಕ, ವಿಜ್ಞಾನಿ ಮೂವರ ಸಂಬಂಧ ಕುರಿತಾತ ಕೃಷಿ ನೀತಿ ಜಾರಿ ಆಗಬೇಕು. ರೈತರು, ರೈತರಿಗೆ ಆಸರೆಯಾಗುವ ಮೂಲಕ ಕೃಷಿ ಉತ್ಪನ್ನಗಳ ಉತ್ಪಾದನೆಗೆ ನೆರವಾಗುತ್ತಿದ್ದ. ಆದರೆ, ಇತ್ತೀಚಿನ ದಿನಗಳಲ್ಲಿ ಇದು ಕಣ್ಮರೆಯಾಗುತ್ತಿದೆ' ಎಂದು ಕಳವಳ ವ್ಯಕ್ತಪಡಿಸಿದರು.
Comments