ಬಿಎಸ್ ವೈ, ಈಶ್ವರಪ್ಪ, ಶೆಟ್ಟರ್ ಚರ್ಚೆಗೆ ಬರಲು ಎಚ್ ಡಿಕೆ ಸವಾಲು

ಯಡಿಯೂರಪ್ಪ, ಈಶ್ವರಪ್ಪ, ಶೆಟ್ಟರ್ ಅವರಿಗೆ ಸವಾಲು ಹಾಕ್ತೀನಿ. ಮಹಾದಾಯಿ ಯೋಜನೆ ಬಗ್ಗೆ ಚರ್ಚೆಗೆ ಬರುವ ಹಾಗಿದ್ದರೆ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ. ಅದನ್ನು ಬಿಟ್ಟು ಬಾಯಿಗೆ ಸಿಕ್ಕಂತೆ ಮಾತನಾಡಿಕೊಂಡು ತಿರುಗಾಡುವುದು ಬೇಡ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಚ್.ಡಿ. ಕುಮಾರಸ್ವಾಮಿ ಮಹಾದಾಯಿ ವಿಚಾರದಲ್ಲಿ ಬೇಜವಾಬ್ದಾರಿಯಿಂದ ಮಾತನಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದ್ದಾರೆ. ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡುವಂತೆ ಮನವೊಲಿಸಲು ಮೈಸೂರಿಗೆ ಹೋಗಿದ್ದೆವು ಎಂದು ಶೆಟ್ಟರ್- ಈಶ್ವರಪ್ಪ ಹೇಳಿದ್ದಾರೆ. ಆದರೆ ಮುಖ್ಯಮಂತ್ರಿ ಗಮನಕ್ಕೆ ಬಾರದೆ ಸಂಪುಟದಲ್ಲಿ ಯಾವ ವಿಷಯವೂ ಚರ್ಚೆಗೆ ಬರಲ್ಲ ಎಂದರು.
ತಾವು ಉಪಮುಖ್ಯಮಂತ್ರಿ- ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನೂರು ಕೋಟಿ ಬಿಡುಗಡೆ ಮಾಡಿರುವುದಾಗಿ ಹೇಳಿದ್ದಾರೆ. ಈ ರೀತಿ ಸುಳ್ಳು ಹೇಳುತ್ತಿರುವುದರಿಂದಲೇ ಸಿದ್ದರಾಮಯ್ಯನವರು ಎಲ್ಲ ಕಡೆ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಯಡಿಯೂರಪ್ಪನವರದು ಸುಳ್ಳೇ ಮನೆ ದೇವರು ಎಂದು ವ್ಯಂಗ್ಯವಾಡಿರುವುದಾಗಿ ಹೇಳಿದರು.
ಕಳಸಾ ಬಂಡೂರಿ ಹಾಗೂ ಮಹಾದಾಯಿ ಯೋಜನೆಗೆ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಅಧಿಕಾರಾವಧಿಯಲ್ಲೇ ಒಪ್ಪಿಗೆ ನೀಡಲಾಗಿತ್ತು. ಆದರೆ ಪರಿಸರ ಇಲಾಖೆಯಿಂದ ಒಪ್ಪಿಗೆ ಸಿಗಲಾರದು ಎಂಬ ಕಾರಣಕ್ಕೆ ಉದ್ಘಾಟನೆ ಕಾರ್ಯಕ್ರಮಕ್ಕೆ ನಾನು ತೆರಳಲಿಲ್ಲ. ಈ ಬಗ್ಗೆ ಬಿಜೆಪಿಯವರ ಗಮನಕ್ಕೆ ತಂದಾಗ, ಕಾರ್ಯಕ್ರಮ ಅನುಷ್ಠಾನಕ್ಕೆ ಬರುತ್ತದೋ ಇಲ್ಲವೋ ಪ್ರಚಾರ ತೆಗೆದುಕೊಳ್ಳಬೇಕು ಎಂದಿದ್ದಾಗಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಯಡಿಯೂರಪ್ಪ ತಾವು ಒಂದೇ ಸಲಕ್ಕೆ ನೂರು ಕೋಟಿ ರುಪಾಯಿ ಬಿಡುಗಡೆ ಮಾಡಿದ್ದಾಗಿ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಈ ವರೆಗೆ ಒಟ್ಟಾರೆಯಾಗಿ ಈ ಯೋಜನೆಗೆ ಬಿಡುಗಡೆ ಆಗಿರುವ ಹಣ ಇನ್ನೂರಾ ಒಂದು ಕೋಟಿ ರುಪಾಯಿ. ಆ ಬಗ್ಗೆ ಪೂರ್ಣ ವಿವರ ಮಾಧ್ಯಮಗಳ ಮುಂದೆ ಇಡುತ್ತಿದ್ದೇನೆ ಎಂದರು.
Comments