ವಿಷವುಣಿಸಿ ಜೆಡಿಎಸ್ ಮುಖಂಡನ ಕೊಲೆ ಮಾಡಿದ ಹಂತಕರು

26 Dec 2017 6:20 PM | Politics
346 Report

ಜೇವರ್ಗಿ ತಾಲೂಕಿನ ಮಾವನೂರ ಗ್ರಾಮದಲ್ಲಿ ಜೆಡಿಎಸ್ ಮುಖಂಡರೊಬ್ಬರನ್ನು ವಿಷವುಣಿಸಿ ಕೊಲೆಮಾಡಲಾಗಿದೆ. ಜೆಡಿಎಸ್ ರೈತ ಘಟಕದ ಮುಖಂಡ ಶಿವರುದ್ರಪ್ಪ ಹಂದನೂರ (59) ಕೊಲೆಯಾದವರು. ಅಮೋಗೆಪ್ಪ, ಭಾಗಣ್ಣ ಹೋತಪೇಟ, ಅಮೋಘಿ ಧೂಳಪ್ಪ, ಧರ್ಮಣ್ಣ, ಸಿದ್ದಪ್ಪ ಸೇರಿ 20ಕ್ಕೂ ಹೆಚ್ಚು ಜನರ ಗುಂಪೊಂದು ಶಿವರುದ್ರಪ್ಪ ಅವರನ್ನು ಬಲವಂತವಾಗಿ ಆಟೋದಲ್ಲಿ ರಾಸಣಗಿ ಕಡೆ ಕರೆದೊಯ್ದು ಹಲ್ಲೆ ನಡೆಸಿ ಕ್ರಿಮಿನಾಶಕ ಕುಡಿಸಿ, ನಂತರ ಅವರನ್ನು ಮಾವನೂರ ಹೊರವಲಯದಲ್ಲಿ ಬಿಟ್ಟು ಪರಾರಿಯಾಗಿದೆ.

ಡಿವೈಎಸ್ಪಿ ಎಸ್.ಎಸ್.ಹುಲ್ಲೂರ, ಸಿಪಿಐ ಡಿ.ಬಿ.ಪಾಟೀಲ್, ಪಿಎಸ್​ಐ ಸಿದ್ದರಾಯ ಬಳೂರಗಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತಂದೆಯನ್ನು ದುರುದ್ದೇಶದಿಂದ ಕೊಲೆ ಮಾಡಲಾಗಿದೆ ಎಂದು ಮೃತರ ಮಗಳು ಭಾಗಮ್ಮ ನೀಡಿದ ದೂರಿನನ್ವಯ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹುಡುಗಿ ವಿಚಾರ ಇಲ್ಲವೇ ಹಳೆಯ ವೈಷ್ಯಮ್ಯವೇ ಕೊಲೆಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.

 

Edited By

Shruthi G

Reported By

Madhu shree

Comments