ಹೆಗಡೆ ಇಂತಹ ಹೇಳಿಕೆಯ ಮೂಲಕ ದ್ವೇಷ ಹುಟ್ಟುಹಾಕುತ್ತಿದ್ದಾರೆ: ಪ್ರಕಾಶ್ ರೈ

ಹೆಗಡೆಗೆ ಮುಕ್ತ ಪತ್ರವೊಂದರನ್ನು ಬರೆದಿರುವ ರೈ, ''ಜಾತ್ಯತೀತ ಎಂದರೆ ವೈವಿಧ್ಯಮಯ ಧರ್ಮಗಳನ್ನು ಗೌರವಿಸುವುದು ಹಾಗೂ ಒಪ್ಪಿಸಿಕೊಳ್ಳುವುದಾಗಿದೆ. ವ್ಯಕ್ತಿಯ ರಕ್ತದಲ್ಲಿ ಜಾತಿ ಹಾಗೂ ನಂಬಿಕೆ ನಿರ್ಧಾರವಾಗುವುದಿಲ್ಲ. ಜಾತ್ಯತೀತ ಎಂದರೆ ಯಾವುದೇ ಧರ್ಮ ಅಥವಾ ನಂಬಿಕೆಯ ಜೊತೆ ಗುರುತಿಸಿಕೊಳ್ಳದಿರುವುದಲ್ಲ. ನಿಮ್ಮದು ಒಂದು ಅಗ್ಗದ ಹೇಳಿಕೆಯಾಗಿದೆ ಎಂದು ನಟ ಪ್ರಕಾಶ್ ರೈಆರೋಪಿಸಿದ್ದಾರೆ.
ನಿಮ್ಮದು ಒಂದು ಅಗ್ಗದ ಹೇಳಿಕೆಯಾಗಿದೆ. ವ್ಯಕ್ತಿಯೊಬ್ಬನ ಹೆತ್ತವರ ಬಗ್ಗೆ ಇಷ್ಟೊಂದು ಕೀಳಾಗಿ ಮಾತನಾಡಿರುವುದು ನನಗೆ ತುಂಬಾ ಅಚ್ಚರಿ ಉಂಟು ಮಾಡಿದೆ'' ಎಂದು ಬರೆದಿದ್ದಾರೆ. 'ಅನಂತ್ಕುಮಾರ್ ಹೆಗಡೆಯವರೇ, ಓರ್ವ ಜನಪ್ರತಿನಿಧಿಯಾಗಿ ವ್ಯಕ್ತಿಯೊಬ್ಬನ ಹೆತ್ತವರ ಬಗ್ಗೆ ಕೀಳಾಗಿ ಹೇಳಿಕೆ ನೀಡುವ ಕೆಳಮಟ್ಟಕ್ಕೆ ಇಳಿದಿರುವುದೇಕೆ' ಎಂದು ಟ್ವೀಟ್ ಮಾಡಿರುವ ರೈ, ತಾವು ಕೇಂದ್ರ ಸಚಿವ ಹೆಗಡೆಗೆ ಬರೆದಿರುವ ಪತ್ರವನ್ನು ಲಗತ್ತಿಸಿದ್ದಾರೆ.
''ಕೆಲವು ಜನ ಸಂವಿಧಾನದಲ್ಲಿ ಜಾತ್ಯತೀತ ಎಂದು ನಮೂದಿಸಲಾಗಿದೆ ಎಂದು ಹೇಳುತ್ತಿದ್ದಾರೆ. ಸಂವಿಧಾನದಲ್ಲಿ ಜಾತ್ಯತೀತ ಪದವಿರುವ ಕಾರಣ ಅದನ್ನು ಬಿಜೆಪಿ ಗೌರವಿಸುತ್ತದೆ. ನಾವು ಮುಂದಿನ ದಿನಗಳಲ್ಲಿ ಸಂವಿಧಾನವನ್ನೇ ಬದಲಿಸುತ್ತೇವೆ. ಈಹಿಂದೆ ಸಂವಿಧಾನವನ್ನು ಹಲವು ಬಾರಿ ಬದಲಾಯಿಸಲಾಗಿತ್ತು'' ಎಂದು ಕೊಪ್ಪಳ ಜಿಲ್ಲೆಯಲ್ಲಿ ಬ್ರಾಹ್ಮಣ ಯುವ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೆಗಡೆ ಹೇಳಿಕೆ ನೀಡಿದ್ದರು. ''ಜಾತ್ಯತೀತರು ಎಂದರೆ ತಂದೆ-ತಾಯಿ ಇಲ್ಲದವರು'' ಎಂದು ಹೇಳಿಕೆ ನೀಡಿದ ಹೆಗಡೆ ಜಾತ್ಯತೀತರನ್ನು ಹೀನಾಯವಾಗಿ ಟೀಕಿಸಿದ್ದರು.
Comments