ಉತ್ತರ ಕರ್ನಾಟಕದ ಪ್ರಭಾವಿ ನಾಯಕರು ತೆನೆ ಹೊರಲು ಸಿದ್ದ

26 Dec 2017 2:50 PM | Politics
14982 Report

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಜೆಡಿಎಸ್ ಸೇರುವ ಸಾಧ್ಯತೆ ಬಗ್ಗೆ ಸುದ್ದಿ ಬಂದಿರುವ ಬೆನ್ನಲ್ಲೇ ಜೆಡಿಎಸ್ ತೊರೆದಿದ್ದ ಹಿರಿ ತಲೆಗಳು ಮತ್ತೆ ತೆನೆ ಹೊರಲು ಸಜ್ಜಾಗುತ್ತಿರುವ ಸುದ್ದಿ ತೂರಿ ಬಂದಿದೆ.

ಜನತಾ ಪರಿವಾರ ತೊರೆದು ಬಿಜೆಪಿ, ಕಾಂಗ್ರೆಸ್ ಸೇರಿ ಆಯಕಟ್ಟಿನ ಜಾಗಗಳಲ್ಲಿ ನೆಲೆಸಿರುವ ಉತ್ತರ ಕರ್ನಾಟಕದ ಪ್ರಭಾವಿ ನಾಯಕರುಗಳು ಈಗ ಮತ್ತೊಮ್ಮೆ ಜೆಡಿಎಸ್ ನತ್ತ ಮುಖ ಮಾಡಿರುವ ಸುದ್ದಿ ಬಂದಿದೆ. ಪಟ್ಟಿಯಲ್ಲಿ ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಅಜಯ್ ಕುಮಾರ್ ಸರ್ ನಾಯ್ಕ ಅಲ್ಲದೇ ಎಂ.ಬಿ. ಪಾಟೀಲ್ ಸೇರಿದಂತೆ ಹಲವು ಮುಖಂಡರನ್ನು ಪಕ್ಷಕ್ಕೆ ಸೆಳೆಯಲು ಜೆಡಿಎಸ್ ಮುಂದಾಗಿದೆ.ಉತ್ತರಕರ್ನಾಟಕದಲ್ಲಿ 50 ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಜೆಡಿಎಸ್ ಹೊಂದಿದ್ದಾರೆ. ಆ ಭಾಗದ ಪ್ರಭಾವಿ ಹಾಗೂ ವರ್ಚಸ್ವಿ ಮುಖಂಡರನ್ನು ಸೆಳೆಯಲು ಮಾತುಕತೆ ನಡೆಸಿದೆ. ಆ ಭಾಗದಿಂದಲೇ ಮಿಷನ್-50 ಎಂದು ಕಾರ್ಯಾಚರಣೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರೇ ನೇತೃತ್ವ ವಹಿಸಿದ್ದಾರೆ. ಈಗಾಗಲೇ ಈ ಮುಖಂಡರೂ ಸೇರಿದಂತೆ ಕೆಲವು ಪ್ರಭಾವಿಗಳ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.

ದೇವೇಗೌಡರು ಮಾತುಕತೆ ನಂತರ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳಲು ಬೆಳಗಾವಿಯಲ್ಲಿ ಬಿಡಾರ ಬಿಟ್ಟಿದ್ದ ಪಕ್ಷದ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕತ್ತಿ, ಜಾರಕಿಹೊಳಿ ಸೇರಿದಂತೆ ಹಲವು ಮುಖಂಡರ ಜೊತೆ ಸಮಾಲೋಚನೆ ಮಾಡಿ, ಅವರ ಮನ ಓಲೈಸಿದ್ದಾರೆ.ರಾಜ್ಯ ಹಾಗೂ ರಾಷ್ಟ್ರದ ಬಿಜೆಪಿ ವರಿಷ್ಠರು ಕಡೆಗಣಿಸುತ್ತಿದ್ದಾರೆ ಎಂದು ಅಸಮಾಧಾನಗೊಂಡಿರುವ ಕತ್ತಿ, ಜಾರಕಿಹೊಳಿ ಪಕ್ಷದಿಂದ ಒಂದು ಹೆಜ್ಜೆ ಹೊರಗಿಟ್ಟಿದ್ದಾರೆ. ಇದರ ಜೊತೆಗೆ ಅವರ ಬೆಂಬಲಿಗರು, ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ರಾಜಕೀಯ ನಿರ್ಣಯ ಕೈಗೊಳ್ಳಲು ತಿಳಿಸಿರುವುದನ್ನು ಅರಿತ ದೇವೇಗೌಡರು, ಮತ್ತೆ ಅವರನ್ನು ಪಕ್ಷಕ್ಕೆ ಕರೆತರಲು ವೇದಿಕೆ ಸಿದ್ಧಪಡಿಸಿದ್ದಾರೆ.

ಸಿಂಧ್ಯಾ ಜೊತೆಗೆ ಬಸವರಾಜ್ ಹೊರಟ್ಟಿ ಹಾಗೂ ವೈಎಸ್‍ವಿ ದತ್ತಾ ಕೂಡಾ ಮುಂಬೈ ಕರ್ನಾಟಕ ಭಾಗದಲ್ಲಿ ಜನತಾ ಪರಿವಾರದ ನಾಯಕರನ್ನು ಸಂಪರ್ಕಿಸಿ, ಕರೆತರುವ ಪ್ರಯತ್ನ ಇದಾಗಿದೆ. ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಈ ಭಾಗದಲ್ಲಿ ಪ್ರಭಾವಿ ಮತ್ತು ವರ್ಚಸ್ಸುಳ್ಳವರನ್ನು ಸಕ್ರಿಯ ರಾಜಕಾರಣಕ್ಕೆ ಕರೆತಂದು ಪಕ್ಷವನ್ನು ಬಲಗೊಳಿಸುವ ನಿಟ್ಟಿನಲ್ಲಿ ಗೌಡರು ಹೆಜ್ಜೆ ಇಟ್ಟಿದ್ದಾರೆ.ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಬೆಳಗಾವಿ, ಚಿಕ್ಕೋಡಿ ಜಿಲ್ಲಾ ನಾಯಕತ್ವ ನೀಡುವುದು, ಅಜಯಕುಮಾರ ಸರ್ ನಾಯಕ ಅವರಿಗೆ ಬಾಗಲಕೋಟೆ, ಈಗಾಗಲೇ ಪಕ್ಷಕ್ಕೆ ಬಂದಿರುವ ಕಾಂಗ್ರೆಸ್‍ನ ಎಸ್‍.ಎಸ್. ಪಾಟೀಲ್ ನಡಹಳ್ಳಿ ಅವರಿಗೆ ವಿಜಾಪುರ ಜಿಲ್ಲಾ ನಾಯಕತ್ವ ನೀಡುವುದರ ಮೂಲಕ ಹೆಚ್ಚು ಸ್ಥಾನ ಗಳಿಸುವುದು ಗೌಡರ ಉದ್ದೇಶ. ಇನ್ನು ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ಹೊಣೆಗಾರಿಕೆಯನ್ನು ವಿಧಾನಪರಿಷತ್ ಹಿರಿಯ ಸದಸ್ಯ ಬಸವರಾಜ್ ಹೊರಟ್ಟಿ ಅವರ ಹೆಗಲಿಗೆ ಹಾಕಲಾಗಿದೆ.

 

 

 

 

Edited By

Shruthi G

Reported By

Shruthi G

Comments