ನವ ಕರ್ನಾಟಕದ ಹೆಸರಿನಲ್ಲಿ ಸಿಎಂ ಮಾಡುವುದೇನಿದೆ: ಎಚ್ ವಿಶ್ವನಾಥ್ ವಾಗ್ದಾಳಿ
ರಾಜ್ಯದಲ್ಲಿ ನವ ಕರ್ನಾಟಕ ಯಾತ್ರೆ ಆರಂಭಿಸಿರುವ ಮುಖ್ಯಮಂತ್ರಿ ಅವರಿಂದಲೇ ಕಾಂಗ್ರೆಸ್ ಕೊನೆಯ ಯಾತ್ರೆಯಾಗಲಿದೆ. ನವ ಕರ್ನಾಟಕದ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡುವುದೇನಿದೆ. ಸುಳ್ಳು ಹೇಳಿಕೊಂಡು ಓಡಾಡುವುದು ಬಿಟ್ಟರೆ ಯಾವ ಪ್ರಯೋಜನವಿಲ್ಲ ಎಂದು ಮಾಜಿ ಸಂಸದರೂ,ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಅಡಗೂರು ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.
ನವ ಕರ್ನಾಟಕದ ಮೂಲ ಉದ್ದೇಶವೇ ಗೊತ್ತಿಲ್ಲದೆ ಸರಕಾರಿ ಹಣದಲ್ಲಿ ಯಾತ್ರೆ ಮಾಡಿಕೊಂಡು ಕೋಟಿ ಕೋಟಿ ಅನುದಾನ ಘೋಷಿಸುತ್ತಾ ಹೊರಟಿದ್ದಾರೆ. ಅಷ್ಟು ಹಣ ಎಲ್ಲಿದೆ ಎಂದು ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು. ಉದ್ದಕ್ಕೂ ಸಾಲ ಮಾಡಿಕೊಂಡು ಕನ್ನಡಿಗರ ಮೇಲೆ ತಲಾ 58 ಸಾಲ ಹೇರಿರುವ ಸಿದ್ದರಾಮಯ್ಯ ಹೊರಟಿರುವುದು ನವ ಕರ್ನಾಟಕ ನಿರ್ಮಾಣ ಯಾತ್ರೆಯಲ್ಲ, ಸಾಲದ ಕರ್ನಾಟಕ ನಿರ್ಮಾಣ ಯಾತ್ರೆ. ರಾಜ್ಯದಲ್ಲಿ ಕಾಂಗ್ರೆಸ್‌ನ ಕೊನೆ ಯಾತ್ರೆಯಾಗಲಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಗೆದ್ದಿರುವ ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಸರಕಾರದ ದುಡ್ಡಲ್ಲಿ ಯಾತ್ರೆ ಮಾಡುತ್ತಿದ್ದರೆ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ರನ್ನು ಕಾಂಗ್ರೆಸ್ ಸೋತಿರುವ ಕ್ಷೇತ್ರಗಳಿಗೆ ಪ್ರವಾಸ ಕಳುಹಿಸಿ ಅಂತರ ಕಾಯ್ದುಕೊಂಡಿದ್ದಾರೆ. ಪ್ರತಿಪಕ್ಷದ ಕ್ಷೇತ್ರಗಳಲ್ಲಿ ಶಾಮಿಯಾನ ಹಾಕಿಸಲು, ಟೀ ತರಿಸಲೂ ಪರಮೇಶ್ವರ್ ತಮ್ಮ ಮನೆಯಿಂದ ಹಣ ಕೊಡಬೇಕಾಗಿದೆ ಎಂದು ಮಾಡಿದರು.
ನವ ಕರ್ನಾಟಕ ನಿರ್ಮಾಣದ ಹೆಸರಿನಲ್ಲಿ ಯಾತ್ರೆ ಹೊರಟು ಹೋದಲ್ಲೆಲ್ಲ ನೂರಾರು ಕೋಟಿ ರು..ಗಳ ಅನುದಾನ ಘೋಷಿಸಿ, ಶಿಲಾನ್ಯಾಸ ಮಾಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಈವರೆಗೆ ಯಾವ್ಯಾವ ಕ್ಷೇತ್ರಗಳಿಗೆ ಎಷ್ಟು ಅನುದಾನ ಕೊಟ್ಟಿದ್ದೇನೆ ಎಂಬ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕಾಂಗ್ರೆಸ್ ಶಾಸಕರಿರುವ 123 ವಿಧಾನಸಭೆ ಕ್ಷೇತ್ರಗಳಿಗೆ ಎಷ್ಟು ಅನುದಾನ ನೀಡಿದ್ದೀರಿ? ಜೆಡಿಎಸ್ ಸೇರಿದಂತೆ ಪಕ್ಷಗಳ ಶಾಸಕರಿರುವ ಕ್ಷೇತ್ರಗಳಿಗೆ ಎಷ್ಟು ಅನುದಾನ ನೀಡಿದ್ದೀರಿ ಎಂಬುದನ್ನು ಜನರಿಗೆ ತಿಳಿಸಲಿ ಎಂದು ಸವಾಲು ಹಾಕಿದರು.
Comments