ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಮಳೆ ಹುಡುಗಿಗೆ ಬಿಗ್ ರಿಲೀಫ್

ನಟಿ ಪೂಜಾಗಾಂಧಿ ಇದೀಗ ನಿರಾಳರಾಗಿದ್ದಾರೆ. ರಾಯಚೂರಿನಲ್ಲಿ ಅವರ ವಿರುದ್ಧ ದಾಖಲಾಗಿದ್ದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಅವರು ಖುಲಾಸೆಗೊಂಡಿದ್ದಾರೆ. ಸಾಕ್ಷ್ಯಾಧಾರ ಕೊರತೆಯಾಗಿರುವ ಕಾರಣ ನಟಿಯ ವಿರುದ್ಧದ ಆರೋಪ ಸಾಬೀತಾಗಿಲ್ಲ. ಹೀಗಾಗಿ ಅವರನ್ನು ಖುಲಾಸೆಗೊಳಿಸಿರುವುದಾಗಿ ರಾಯಚೂರಿನ ಜೆಎಂಎಫ್ ಸಿ 2ನೇ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದೆ. ನ್ಯಾಯಾಧೀಶೆ ಪೂರ್ಣಿಮಾ ಯಾದವ್ ಪೂಜಾಗಾಂಧಿ ಅವರನ್ನು ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿದ್ದಾರೆ.
2013 ರಲ್ಲಿ ರಾಯಚೂರು ನಗರ ಕ್ಷೇತ್ರಕ್ಕೆ ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಚುನಾವಣೆಯಲ್ಲಿ ಬಿಎಸ್‍ಆರ್ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಪೂಜಾ ಗಾಂಧಿ ಅನುಮತಿ ಇಲ್ಲದ ವಾಹನವನ್ನು ಚುನಾವಣಾ ಪ್ರಚಾರಕ್ಕೆ ಬಳಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದರು. ಈ ಬಗ್ಗೆ ಸದರಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 5 ಬಾರಿ ವಿಚಾರಣೆಗೆ ಗೈರಾಗಿದ್ದ ಪೂಜಾ ಗಾಂಧಿಗೆ ವಾರೆಂಟ್ ಜಾರಿ ಮಾಡಲಾಗಿತ್ತು. ಅಂದಿನಿಂದಲೂ ಪೂಜಾಗಾಂಧಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ಎದುರಿಸುತ್ತಿದ್ದರು.
ಈ ಪ್ರಕರಣದ ಆರೋಪದಿಂದ ಈಗ ಪೂಜಾಗಾಂದಿ ಮುಕ್ತಿಯಾಗಿದ್ದಾರೆ ಎಂದು ಪೂಜಾಗಾಂಧಿ ಪರ ವಕೀಲ ನಾಗರಾಜ್ ನಾಯಕ ಹೇಳಿದ್ದಾರೆ. ತೀರ್ಪಿನಿಂದ ತುಂಬಾ ಖುಷಿಯಾಗಿದೆ. ಪ್ರಕರಣ ಮುಗಿದರೂ ರಾಯಚೂರಿಗೆ ಮತ್ತೆ ಮತ್ತೆ ಬರ್ತಿನಿ ಎಂದು ಪೂಜಾಗಾಂಧಿ ಹೇಳಿದ್ದಾರೆ. ಹೊಸ ವರ್ಷವನ್ನ ಪ್ರತಿ ದಿನದಂತೆ ಖುಷಿಯಾಗಿ ಸ್ವಾಗತಿಸುತ್ತೇನೆ. ನಾನು ಯಾವಾಗ ಮದುವೆ ಆಗುತ್ತೇನೆ ಆಗ ಹೇಳುತ್ತೇನೆ ಎಂದು ಪೂಜಾಗಾಂಧಿ ಹೇಳಿದರು.
Comments