ಜನವರಿ 5ರಿಂದ ಉತ್ತರ ಕರ್ನಾಟಕದತ್ತ ಕುಮಾರ ಪರ್ವ

ಜನವರಿ 5ರಿಂದ 30ರವರೆಗೆ 25 ದಿನಗಳ ಕಾಲ ಉತ್ತರಕರ್ನಾಟಕದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರವಾಸ ಕೈಗೊಳ್ಳಲಿದ್ದಾರೆ. ಉತ್ತರ ಕರ್ನಾಟಕ ಜನರ ಸ್ಥಿತಿಗತಿಗಳನ್ನು ಅರಿಯಲು ಕೈಗೊಂಡಿರುವ ಈ ಪ್ರವಾಸವನ್ನು ಬೆಳಗಾವಿಯ ಕಾಗವಾಡದಿಂದ ಜ.5ರಂದು ಆರಂಭಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು ಈ ವಿಷಯ ತಿಳಿಸಿದ್ದು, ಉತ್ತರ ಕರ್ನಾಟಕದ ಪ್ರತಿ ತಾಲ್ಲೂಕಿನಲ್ಲೂ ಸಭೆ ನಡೆಸಿ ಅಲ್ಲಿನ ವಾಸ್ತವ ಸಂಗತಿಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.
ಮಹದಾಯಿ ನದಿನೀರು ಹಂಚಿಕೆ ವಿಚಾರದಲ್ಲಿನ ಸತ್ಯ ಸಂಗತಿಗಳ ಬಗ್ಗೆ ನೀರಾವರಿ ಹಾಗೂ ಕಾನೂನು ತಜ್ಞರು ಬೆಳಕು ಚೆಲ್ಲಬೇಕು ಎಂದ ಅವರು, ಉತ್ತರ ಕರ್ನಾಟಕದ ಜನರ ಸಮಸ್ಯೆಗಳ ಚರ್ಚೆಗೂ ಇದು ವೇದಿಕೆಯಾಗಲಿದೆ ಎಂದರು. ಈಗಾಗಲೇ ನಿನ್ನೆ ಮುಂಬೈ ಕರ್ನಾಟಕದ ಭಾಗದ ಜೆಡಿಎಸ್ ಸಭೆಯನ್ನು ನಡೆಸಲಾಗಿದ್ದು , ಇಂದು ಹೈದರಾಬಾದ್ ಕರ್ನಾಟಕ ಭಾಗದ ಸಭೆಯನ್ನು ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡಲಿದ್ದೇವೆ ಎಂದರು. ನಾವು ಮುಖ್ಯಮಂತ್ರಿಯಾಗಿದ್ದು ನಾಲ್ಕು ಜನ ಶಾಸಕರಿಂದ ಮಾತ್ರವಲ್ಲ. ಬಿಜೆಪಿ, ಜೆಡಿಎಸ್ ಶಾಸಕರ ಸಹಕಾರದಿಂದ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಅಧಿಕಾರ ಪಡೆದಿದ್ದವರು ಜೆಡಿಎಸ್‍ನಿಂದಲೇ ಅದನ್ನು ಪಡೆದಿದ್ದೆವು ಎಂಬುದನ್ನು ಮರೆಯಬಾರದು ಎಂದು ಭಿನ್ನಮತೀಯ ಶಾಸಕರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
Comments