ದಾನಮ್ಮಳ ಮೇಲೆ ಸಾಮೂಹಿಕ ಅತ್ಯಾಚಾರ,ಕೊಲೆ ಖಂಡಿಸಿ ಜೆಡಿಎಸ್ ಪ್ರತಿಭಟನೆ
ವಿಜಯಪುರದಲ್ಲಿ ದಲಿತ ಬಾಲಕಿ ದಾನಮ್ಮಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಅಮಾನುಷವಾಗಿ ಕೊಲೆಗೈದಿರುವುದನ್ನು ವಿರೋಧಿಸಿ ಜಾತ್ಯತೀತ ಜನತಾದಳ ಸೇರಿದಂತೆ ವಿವಿಧ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ತಪ್ಪಿತಸ್ಥರನ್ನು ಕೂಡಲೆ ಬಂಧಿಸಿ ದುಃಖತಪ್ತ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದವು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಯಾರಿಗೂ ರಕ್ಷಣೆ ಇಲ್ಲದಂತಾಗಿದೆ. ವಿಜಯಪುರದಲ್ಲಿ ದಲಿತ ಬಾಲಕಿ ದಾನಮ್ಮಳ ಮೇಲೆ ಕಾಮುಕರು ಅತ್ಯಾಚಾರ ನಡೆಸಿ ಕೊಲೆಗೈದಿರುವುದನ್ನು ನೋಡಿದರೆ ಸರ್ಕಾರವೇ ಸುಪಾರಿ ಕೊಟ್ಟು ಕೊಲೆ ಮಾಡಿಸುತ್ತಿದೆಯೇನೋ ಎನ್ನುವ ಅನುಮಾನ ಕಾಡುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರದಲ್ಲಿ ಯಾರಿಗೂ ರಕ್ಷಣೆಯೇ ಇಲ್ಲದಂತಾಗಿದೆ.
ಕೂಡಲೆ ಅತ್ಯಾಚಾರಿಗಳನ್ನು ಬಂಧಿಸಿ ನೇಣಿಗೇರಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಜೆಡಿಎಸ್.ನಿಂದ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಅತ್ಯಾಚಾರದ ಪ್ರಮುಖ ಆರೋಪಿ ದೀಪಕ್ಮೊಳಸಾವಳಗಿ ವಿರುದ್ದ ಬಾಲಕಿಯ ತಂದೆ ದೂರು ನೀಡಿದ್ದರೂ ಇದುವರೆವಿಗೂ ಪೊಲೀಸರು ಬಂಧಿಸಿಲ್ಲ. ಮೃತ ಕುಟುಂಬಕ್ಕೆ ೨೫ ಲಕ್ಷ ರೂ. ಪರಿಹಾರ ನೀಡಿ ಕುಟುಂಬದಲ್ಲಿ ಯಾರಿಗಾದರೂ ಒಬ್ಬರಿಗೆ ಸರ್ಕಾರ ನೌಕರಿ ಕೊಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
Comments