ಜೆಡಿಎಸ್ ಪಕ್ಷ ಕಿಂಗ್ ಮೇಕರ್ ಆಗುವ ಬದಲು ಕಿಂಗ್ ಆಗಬೇಕು : ಎಚ್ ಡಿಕೆ ಸಲಹೆ

ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಕಿಂಗ್ ಮೇಕರ್ ಆಗುವ ಬದಲು ಕಿಂಗ್ ಆಗಿಸುವಲ್ಲಿ ಪಕ್ಷದ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಈಗಿನಿಂದಲೇ ಗೆಲ್ಲುವ ಕಾರ್ಯತಂತ್ರದ ಬಗ್ಗೆ ಅಗತ್ಯ ಸಲಹೆ ಸೂಚನೆಗಳನ್ನುಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ನೀಡಿದರು.
ತಮ್ಮ ಕ್ಷೇತ್ರಗಳಲ್ಲಿ ಕಾರ್ಯಕರ್ತರನ್ನು ಲಘುವಾಗಿ ಪರಿಗಣಿಸದೆ ವಿಶ್ವಾಸಕ್ಕೆ ತೆಗೆದುಕೊಂಡು ಸಜ್ಜುಗೊಳಿಸಬೇಕು. ಕ್ಷೇತ್ರಗಳಲ್ಲಿ ಹಿಂದುಳಿದ ವರ್ಗ, ಮಹಿಳೆಯರು, ರೈತರು, ಅಲ್ಪಸಂಖ್ಯಾತರ ಸಮಾವೇಶಗಳನ್ನು ನಡೆಸುವ ಮೂಲಕ ಪಕ್ಷದ ವರ್ಚಸ್ಸನ್ನು ಹೆಚ್ಚಿಸುವಲ್ಲಿ ಪಕ್ಷದ ಶಾಸಕರು ಕಾರ್ಯೋನ್ಮುಖರಾಗುವಂತೆ ಕಿವಿಮಾತು ಹೇಳಿದರು. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಜೆಡಿಎಸ್ ಚುನಾವಣೆಯಲ್ಲಿ ಸೆಣಸಬೇಕಿದೆ. ಹಾಗಾಗಿ, ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಮತ್ತು ರಾಜ್ಯಸರ್ಕಾರಗಳ ವೈಫಲ್ಯಗಳನ್ನು ಜನರ ಮುಂದಿಡಬೇಕೆಂದು ಅವರು ತಿಳಿಸಿದರು. ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಪಕ್ಷದ ಕಾರ್ಯಕರ್ತರನ್ನು ಚುನಾವಣೆಗೆ ಸಜ್ಜುಗೊಳಿಸಬೇಕು.
ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಯಾವುದೇ ಗೊಂದಲ ಹಾಗೂ ಭಿನ್ನಮತ ಬಾರದಂತೆ ಶಾಸಕರುಗಳು ಎಚ್ಚರಿಕೆ ವಹಿಸಬೇಕೆಂದು ಕಿವಿಮಾತು ಹೇಳಿದರು. ಪ್ರತಿ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹಾಗೂ ನಾನು ಪ್ರವಾಸ ಕೈಗೊಳ್ಳಲಿದ್ದೇವೆ. ಪಕ್ಷವನ್ನು ಅಧಿಕಾರಕ್ಕೆ ತರುವುದೊಂದೇ ಏಕೈಕ ಗುರಿಯಾಗಿರಬೇಕು ಹಾಗೂ ಇನ್ನಿತರ ಕಾರ್ಯತಂತ್ರಗಳ ಬಗ್ಗೆ ಅವರು ಸಮಾಲೋಚನೆ ನಡೆಸಿದರು. ಸಭೆಯಲ್ಲಿ ಶಾಸಕರಾದ ಹೆಚ್.ಡಿ ರೇವಣ್ಣ, ಎಚ್.ಕೆ ಕುಮಾರಸ್ವಾಮಿ, ಗೋಪಾಲಯ್ಯ, ನಾರಾಯಣಗೌಡ, ಡಾ. ಶ್ರೀನಿವಾಸ್, ಕಾಂತರಾಜ್, ಶರವಣ, ಕೆ.ಪಿ ಶ್ರೀಕಂಠಯ್ಯ, ಕೃಷ್ಣಾರೆಡ್ಡಿ, ಪಿಳ್ಳ ಮುನಿಸ್ವಾಮಪ್ಪ ಸೇರಿದಂತೆ ಹಲವು ಶಾಸಕರು ಉಪಸ್ಥಿತರಿದ್ದರು.
Comments