ಕರ್ನಾಟಕದಲ್ಲಿ ಕೇಸರಿ ಪಕ್ಷ 150 ಸೀಟುಗಳನ್ನು ಗೆಲ್ಲಲಿದೆ : ಬಿ ಎಸ್ ವೈ

ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಜಯದ ಸಾಧನೆಯೆಲ್ಲವೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಸಲ್ಲಬೇಕು. ನಾನು ಅವರಿಬ್ಬರನ್ನೂ ಅಭಿನಂದಿಸುತ್ತೇನೆ. ಅವರಿಬ್ಬರ ಸೂತ್ರಗಳು ಮುಂಬರುವ ಕರ್ನಾಟಕ ಚುನಾವಣೆಯಲ್ಲಿ ಕೂಡ ಕೆಲಸ ಮಾಡಲಿದೆಎಂದರು.
ಇಂದಿನ ಫಲಿತಾಂಶ ಕರ್ನಾಟಕ ಕಾಂಗ್ರೆಸ್ ಮುಕ್ತ ರಾಜ್ಯವಾಗಲಿದೆ ಎಂಬುದನ್ನು ಸೂಚಿಸುತ್ತದೆ. ರಾಜ್ಯವೊಂದರ ಚುನಾವಣಾ ಫಲಿತಾಂಶ ಪ್ರಕಟಗೊಂಡಾಗ ಇಡೀ ದೇಶಾದ್ಯಂತ ಸಂಭ್ರಮಿಸುವುದನ್ನು ನೋಡುತ್ತಿರುವುದು ಅಪರೂಪ ಎಂದರು. ಮೋದಿಯವರ ವರ್ಚಸ್ಸಿನ ಮುಂದೆ ರಾಹುಲ್ ಗಾಂಧಿ ಸಂಪೂರ್ಣ ವಿಫಲರಾಗಿದ್ದಾರೆ ಎಂಬುದನ್ನು ಬಿಜೆಪಿಯ ಗೆಲುವು ಸಾರುತ್ತದೆ. ಕಾಂಗ್ರೆಸ್ ಪಕ್ಷವನ್ನು ಉಳಿಸಲು ರಾಹುಲ್ ಗಾಂಧಿಯವರಿಂದ ಸಾಧ್ಯವಿಲ್ಲ. ನೋಟುಗಳ ಅಮಾನ್ಯತೆ ಮತ್ತು ಸರಕು ಮತ್ತು ಸೇವಾ ತೆರಿಗೆ ಜಾರಿಯನ್ನು ಋಣಾತ್ಮಕವಾಗಿ ತೋರಿಸಲು ಕಾಂಗ್ರೆಸ್ ಯತ್ನಿಸಿದರೂ ಕೂಡ ಮೋದಿ ಹಾಗೂ ಅಮಿತ್ ಶಾ ಅವರಿಂದಾಗಿ ಬಿಜೆಪಿಯನ್ನು ಸೋಲಿಸಲು ಜನತೆ ಬಿಡಲಿಲ್ಲ. ಕರ್ನಾಟಕವನ್ನು ಕೂಡ ಕಾಂಗ್ರೆಸ್ ಮುಕ್ತ ರಾಜ್ಯವನ್ನಾಗಿ ಮಾಡುವ ಕನಸನ್ನು ನನಸು ಮಾಡುವತ್ತ ಇಬ್ಬರು ನಾಯಕರು ಕೂಡ ಗಮನ ಹರಿಸಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.
ಬಿಜೆಪಿ ಗೆದ್ದ ಸೀಟುಗಳ ಸಂಖ್ಯೆ ಕಡಿಮೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಒಂದು ಪಕ್ಷ ಅನೇಕ ವರ್ಷಗಳಿಂದ ಅಧಿಕಾರದಲ್ಲಿರುವಾಗ ಇಂತಹ ವಾತಾವರಣ ಕಂಡುಬರುವುದು ಸಹಜ ಎಂದರು. ವಿದ್ಯುನ್ಮಾನ ಮತ ಯಂತ್ರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಪಡಿಸಿದ ಸಂಶಯದ ಬಗ್ಗೆ ಮಾತನಾಡಿದ ಅವರು, ಮುಖ್ಯಮಂತ್ರಿಯವರ ಹೇಳಿಕೆ ಬಾಲಿಶವಾದುದು. ಸಿದ್ದರಾಮಯ್ಯನವರಿಗೆ ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಗೊತ್ತಿದೆ ಎಂದರು. ಇದೇ ವಿದ್ಯುನ್ಮಾನ ಮತಯಂತ್ರಗಳ ಸಹಾಯದಿಂದ ಇತ್ತೀಚೆಗೆ ಗುಂಡ್ಲುಪೇಟೆ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಸಲಾಯಿತು.ಆಗ ಕಾಂಗ್ರೆಸ್ ಗೆದ್ದಿತು. ಹಾಗಾದರೆ ಸಿದ್ದರಾಮಯ್ಯನವರು ಈಗ ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ಸಂಶಯ ವ್ಯಕ್ತಪಡಿಸಲು ಹೇಗೆ ಸಾಧ್ಯ ಎಂದು ಯಡಿಯೂರಪ್ಪ ಪ್ರಶ್ನಿಸಿದರು.
Comments