ಗುಜರಾತ್ ಚುನಾವಣಾ ಫಲಿತಾಂಶ ಕುರಿತು ಪ್ರತಿಕ್ರಿಯಿಸಿದ ದೇವೇಗೌಡ್ರು

ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದಕ್ಕೆ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಬಿಜೆಪಿಯನ್ನು ಅಭಿನಂದಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ದೇವೇಗೌಡ್ರು,ನನ್ನ ರಾಜಕೀಯ ಜೀವನದಲ್ಲಿ ಇದುವರೆಗೆ ಹದಿನಾಲ್ಕು ಚುನಾವಣೆಯನ್ನು ನೋಡಿದ್ದೇನೆ. ಆದರೆ ಗುಜರಾತ್ ಚುನಾವಣೆಯಷ್ಟು ಕೀಳು ಮಟ್ಟದ ಪ್ರಚಾರವನ್ನು ಇದುವರೆಗೂ ನೋಡಿರಲಿಲ್ಲ ಎಂದು ಗೌಡ್ರು ವಿಷಾದ ವ್ಯಕ್ತ ಪಡಿಸಿದ್ದಾರೆ.ಕರ್ನಾಟಕದ ಸ್ಥಿತಿಯೇ ಬೇರೆ, ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಯೇ ಬೇರೆ, ಈ ಎರಡು ರಾಜ್ಯಗಳ ಚುನಾವಣಾ ಫಲಿತಾಂಶ ಕರ್ನಾಟಕದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ದೇವೇಗೌಡರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ರಾಜಕೀಯವೇ ಬೇರೆ, ಗುಜರಾತಿನ ರಾಜಕೀಯವೇ ಬೇರೆ. ಗುಜರಾತಿನಲ್ಲಿ ಬಹುತೇಕ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ. ಆದರೆ, ಕರ್ನಾಟಕದಲ್ಲಿ ಹೆಚ್ಚಿನ ಕಡೆ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತ್ರಿಕೋಣ ಸ್ಪರ್ಧೆಯಿರಲಿದೆ ಎಂದು ಗೌಡರು ಹೇಳಿದ್ದಾರೆ. ಮುಂದಿನ ಕರ್ನಾಟಕ ಚುನಾವಣೆಯಲ್ಲಿ ಜೆಡಿಎಸ್ ಸರಳ ಬಹುಮತವನ್ನು ಪಡೆದು ಅಧಿಕಾರಕ್ಕೆ ಬರಲಿದೆ ಎಂದು ದೇವೇಗೌಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Comments