ಬೆಂಗಳೂರಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆಯ ರಣಕಹಳೆ
ರಾಜ್ಯದಲ್ಲಿ ಪರಿವರ್ತನಾ ಯಾತ್ರೆ ಮಾಡುವ ಮೂಲಕ ಚುನಾವಣಾ ರಣಕಹಳೆ ಮೊಳಗಿಸಿರುವ ಭಾರತೀಯ ಜನತಾ ಪಕ್ಷ ಇಂದು ನಗರದಲ್ಲೂ ಬಲ ಪ್ರದರ್ಶನ ಮಾಡಿದೆ. ನಗರದ ಮುರುಗೇಶಪಾಳ್ಯದ ವಿಶ್ವೇಶ್ವರಯ್ಯ ಶಾಲಾ ಆಟದ ಮೈದಾನದಲ್ಲಿ ಪರಿವರ್ತನಾ ಯಾತ್ರೆಯ ಎರಡನೆ ಸಮಾವೇಶ ನಡೆಸುವ ಮೂಲಕ ಶಕ್ತಿ ಪ್ರದರ್ಶಿಸಿದ ಬಿಜೆಪಿ, 'ಕಾಂಗ್ರೆಸ್ ಮುಕ್ತ ಕರ್ನಾಟಕ' ರಚಿಸುವುದಾಗಿ ಘೋಷಿಸಿದೆ.
ಎಲ್ಲೆಡೆ ಬಿಜೆಪಿಯ ಧ್ವಜಗಳು, ಸ್ವಾಗತ ಕೋರುವ ಕಮಾನುಗಳು, ರಾಷ್ಟ್ರೀಯ ಹಾಗೂ ರಾಜ್ಯ ನಾಯಕರ ಕಟೌಟ್‍ಗಳು, ಬ್ಯಾನರ್, ಬಂಟಿಂಗ್ಸ್‍ಗಳಿಂದ ಗಮನ ಸೆಳೆಯಿತು. ಮತ್ತೊಂದೆಡೆ ಮಹಿಳಾ ಮೋರ್ಚಾ ಪದಾಧಿಕಾರಿಗಳು ಕೇಸರಿ ಸೀರೆಯುಟ್ಟು ಪರಿವರ್ತನಾ ಯಾತ್ರೆಗೆ ಕಳೆ ಕಟ್ಟಿದರೆ ಕೇಸರಿ ರುಮಾಲು ಹಾಕಿ ಮತ್ತಿತರರು ಇಡೀ ಕಾರ್ಯಕ್ರಮದಲ್ಲಿ ಎಲ್ಲರ ಚಿತ್ತ ಅತ್ತ ಹರಿಯುವಂತೆ ಮಾಡಿದ್ದರು. ಮಣಿಪಾಲ್ ಆಸ್ಪತ್ರೆಯಿಂದ ಆರಂಭಗೊಂಡು ವಿಶ್ವೇಶ್ವರಯ್ಯ ಆಟದ ಮೈದಾನದವರೆಗೂ ನಡೆದ ರ್ಯಾಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್‍ಕುಮಾರ್, ಸದಾನಂದಗೌಡ, ಅರವಿಂದ ಲಿಂಬಾವಳಿ ಮತ್ತಿತರ ಮುಖಂಡರು, ಸಾವಿರಾರು ಕಾರ್ಯಕರ್ತರು ಸಾಥ್ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಸೋಮಣ್ಣ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಭ್ರಷ್ಟ ಕಾಂಗ್ರೆಸ್ ಕಿತ್ತೊಗೆಯುವುದೇ ನಮ್ಮ ಗುರಿ. 'ಕಾಂಗ್ರೆಸ್ ಮುಕ್ತ ಕರ್ನಾಟಕ' ರಚಿಸುತ್ತೇನೆ ಎಂದರು.
Comments