ಸಿಎಂ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಬಿಎಸ್ ವೈ

ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬ ಅಯೋಗ್ಯ. ಇನ್ನು ನೂರು ದಿನದಲ್ಲಿ ಮನೆಗೆ ಹೋಗುತ್ತಾನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ನನ್ನನ್ನು ಪದೇ ಪದೇ ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇಂತಹ ಅಯೋಗ್ಯ ಮುಖ್ಯಮಂತ್ರಿಯನ್ನು ಕರ್ನಾಟಕ ಎಂದೂ ಕಂಡಿರಲಿಲ್ಲ.
ಮೊದಲು ಬೊಗಳೆ ಬಿಡುವುದನ್ನು ಬಿಡಿ. ರಾಜ್ಯದ ಜನತೆ ಇನ್ನು ನೂರು ದಿನದಲ್ಲಿ ನಿಮ್ಮನ್ನು ಮನೆಗೆ ಕಳುಹಿಸದಿದ್ದರೆ ನಾನು ಯಡಿಯೂರಪ್ಪನೇ ಅಲ್ಲ ಎಂದು ಸವಾಲು ಹಾಕಿದರು. ನನಗೆ ಜಾಮೀನು ಸಿಗದ ಕಾರಣ ಜೈಲಿಗೆ ಹೋಗಬೇಕಾದ ಪರಿಸ್ಥಿತಿ ಬಂತು. ಜಾಮೀನು ಸಿಕ್ಕಿದ್ದರೆ ನಿಮ್ಮಂಥವರು ಇಂದು ಮಾತನಾಡುವ ಪರಿಸ್ಥಿತಿ ಬರುತ್ತಿರಲಿಲ್ಲ. ನಾನು ಲಂಚ ತೆಗೆದುಕೊಂಡಿದ್ದಕ್ಕೆ ಜೈಲಿಗೆ ಹೋಗಿದ್ದೇನೆ ಎಂದು ಯಾವ ನ್ಯಾಯಾಲಯ ಹೇಳಿದೆ ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು. ನನಗೆ ಸಿಬಿಐ, ಹೈಕೋರ್ಟ್ ಸೇರಿದಂತೆ ಅನೇಕ ನ್ಯಾಯಾಲಯಗಳು ಕ್ಲೀನ್‍ಚಿಟ್ ನೀಡಿವೆ. ದ್ವೇಷದ ರಾಜಕಾರಣಕ್ಕಾಗಿ ಸುಪ್ರೀಂಕೋರ್ಟ್‍ನಲ್ಲಿ ನೀವು ಮೇಲ್ಮನವಿ ಸಲ್ಲಿಸಿದ್ದೀರಿ. ನ್ಯಾಯಾಲಯದಿಂದ ನನಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.
ಯಡಿಯೂರಪ್ಪನವರ ಮೇಲೆ 42 ಪ್ರಕರಣಗಳು ದಾಖಲಾಗಿವೆ ಎಂದು ಹೋದ ಕಡೆಯಲ್ಲೆಲ್ಲ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಅನೇಕ ಪ್ರಕರಣಗಳನ್ನು ನ್ಯಾಯಾಲಯವೇ ರದ್ದುಪಡಿಸಿದೆ. ಇನ್ನು ಕೆಲವು ಪ್ರಕರಣಗಳಿಗೆ ತಡೆಯಾಜ್ಞೆ ಸಿಕ್ಕಿದೆ. 32 ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. 10 ಪ್ರಕರಣಗಳು ಯಾವು ಎಂಬುದನ್ನು ಬಹಿರಂಗಪಡಿಸಬೇಕು, ಎಸಿಬಿಯನ್ನು ದುರ್ಬಳಕೆ ಮಾಡಿಕೊಂಡು ನನ್ನ ಮೇಲೆ ವಿನಾಕಾರಣ ದೂರು ದಾಖಲಿಸಿದ್ದೀರಿ. ನಮ್ಮ ಸರ್ಕಾರ ಇದ್ದಾಗ ಲೋಕಾಯುಕ್ತ ಸಂಸ್ಥೆ ಸಕ್ರಿಯವಾಗಿದ್ದರೆ ನೀವು ಸೇರಿದಂತೆ ನಿಮ್ಮ ಸಂಪುಟದ ಅನೇಕ ಸಚಿವರು ಜೈಲಿಗೆ ಹೋಗಬೇಕಾಗಿತ್ತು ಎಂದು ಎಚ್ಚರಿಸಿದರು. ಹೋದ ಕಡೆಯಲೆಲ್ಲ ಕರ್ನಾಟಕ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿಯಾಗಿದೆ ಎಂದು ಸಿದ್ದರಾಮಯ್ಯ ಬೊಗಳೆ ಬಿಡುತ್ತಾರೆ ಎಂದು ಗುಡುಗಿದರು.
Comments