ಎಚ್‌ಡಿಕೆ ಸಿಎಂ ಆಗೋದು ಸೂರ್ಯ-ಚಂದ್ರ ಇರುವಷ್ಟೇ ಸತ್ಯ : ದೇವೇಗೌಡ್ರು

ಪ್ರಪಂಚದಲ್ಲಿ ಸೂರ್ಯ-ಚಂದ್ರ ಇರುವುದು ಎಷ್ಟು ಸತ್ಯವೋ ರಾಜ್ಯದಲ್ಲಿ ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ಅಷ್ಟೇ ಸತ್ಯ ಹಾಗೂ ಕುಮಾರಸ್ವಾಮಿ ಸಿಎಂ ಆದಾಗಲೇ ನನ್ನ ರಾಜಕಿಯ ಜೀವನ ಸಾರ್ಥಕ' ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭಾವುಕರಾಗಿ ನುಡಿದರು.
ತಾಲೂಕಿನ ಇತಿಹಾಸ ಪ್ರಸಿದ್ಧ ನೀಲಸಂದ್ರ ಭೈರವೇಶ್ವರಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ 10 ವರ್ಷದ ದುರಾಡಳಿತದಲ್ಲಿ ರಾಜ್ಯದ ಜನತೆ ನಲುಗಿದ್ದಾರೆ. ಎಚ್‌ಡಿಕೆ 20 ತಿಂಗಳ ಕಾಲ ನಡೆಸಿದ ಜನಪರ ಅಧಿಕಾರ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ರಾಜ್ಯದಲ್ಲಿ ಜೆಡಿಎಸ್ ಪರ್ವ ಆರಂಭವಾಗಿದ್ದು, ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗುತ್ತಾರೆಂದು ಹೇಳಿದರು. ಅನಿತಾ, ಭವಾನಿ, ನಿಖೀಲ್, ಪ್ರಜ್ವಲ್ ಅವರು ರಾಜಕೀಯ ಪ್ರವೇಶ ಮಾಡುತ್ತಾರೆಂಬ ಅಪಪ್ರಚಾರ ನಡೆಸಲಾಗುತ್ತಿದೆ. ನಾನು ಮತ್ತೆ ಕುಟುಂಬ ರಾಜಕಾರಣ ಮುಂದುವರಿಸುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ಚನ್ನಪಟ್ಟಣ ಕ್ಷೇತ್ರದಲ್ಲಿ ಜೆಡಿಎಸ್ ಸದೃಢವಾಗಿದೆ. ಈಗಲೇ ಅಭ್ಯರ್ಥಿಯ ಘೋಷಣೆ ಮಾತು ಬೇಡವೆಂದು ದೇವೇಗೌಡರು ಮುಖಂಡರಿಗೆ ಖಡಕ್ ಎಚ್ಚರಿಕೆ ನೀಡುವ ಮೂಲಕ ಅನಿತಾ ಸ್ಪರ್ಧೆ ಬಗ್ಗೆ ಮತ್ತೆ ಪ್ರಶ್ನಾರ್ಥಕ ಚಿಹ್ನೆ ಇಟ್ಟರು.
Comments