ಪಾರದರ್ಶಕ ಚುನಾವಣಾ ಆಯೋಗಕ್ಕೆ ಎಚ್‍ಡಿಕೆ ಮಾಸ್ಟರ್ ಪ್ಲಾನ್
ಮತದಾರರ ಪಟ್ಟಿಗೆ ಆಧಾರ್ ಲಿಂಕ್ ಜೋಡಣೆ ಮಾಡುವುದರ ಮೂಲಕ ಕರ್ನಾಟಕದಲ್ಲಿ ಬರುವ ವಿಧಾನಸಭೆಯ ಚುನಾವಣೆಯು ಪಾರದರ್ಶಕವಾಗಿ ನಡೆಯಲು ಅವಕಾಶ ಕಲ್ಪಿಸಬೇಕೆಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಕೇಂದ್ರ ಚುನಾವಣಾ ಆಯೋಗದ ಆದೇಶದನ್ವಯ ಕರ್ನಾಟಕದಲ್ಲಿ ಜ. 2018 ಕ್ಕೆ ಅನ್ವಯವಾಗುವಂತೆ ಮತದಾರರ ಪಟ್ಟಿಯ ಪರಿಷ್ಕರಣಾ ಕಾರ್ಯ ಕೈಗೊಂಡಿದ್ದು, ಮತದಾರರ ಪಟ್ಟಿಯ ನೋಂದಣಿಯಲ್ಲಿ ಆಗಿರಬಹುದಾದ ಲೋಪದೋಷಗಳನ್ನು ಸರಿಪಡಿಸಲು ಮತದಾರರ ಪಟ್ಟಿಯ ಪರಿಷ್ಕರಣಾ ಕಾರ್ಯದಲ್ಲಿ ಅವಕಾಶ ನೀಡಲಾಗಿದೆ.
ಮತದಾರರ ಹೆಸರು ಒಂದಕ್ಕಿಂತ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಅಥವಾ ಲೋಕಸಭಾ ಕ್ಷೇತ್ರಗಳಲ್ಲಿ ನೋಂದಣಿ ಆಗದಂತೆ ಕ್ರಮ ವಹಿಸುವುದು ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯಲ್ಲಿರುವ ಮತದಾರರ ಹೆಸರಿಗೆ ಆಧಾರ್‍ಲಿಂಕ್ ಮಾಡಿದರೆ ಇಂತಹ ದುರುಪಯೋಗವನ್ನು ತಡೆಯಲು ಸಾಧ್ಯವಾಗಲಿದೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪ್ರಸಕ್ತ ಸಾಲಿನಲ್ಲಿ ಮತದಾರರ ಪಟ್ಟಿಗೆ ಆಧಾರ್ ಲಿಂಕ್ ಮಾಡುವ ಮೂಲಕ ಪಾರದರ್ಶಕ ಚುನಾವಣೆಗೆ ಅವಕಾಶ ಮಾಡಿಕೊಡುವಂತೆ ಕೋರಿದ್ದಾರೆ.
ಪಾರದರ್ಶಕವಾದ ಚುನಾವಣೆಗಳನ್ನು ನಡೆಸುವ ದೃಷ್ಟಿಯಿಂದ ಹಾಗೂ ಅಕ್ರಮ ಮಾರ್ಗಗಳನ್ನು ತಡೆಯುವ ದೃಷ್ಟಿಯಿಂದ ಮತದಾರರ ಹೆಸರಿಗೆ ಆಧಾರ್ ಲಿಂಕ್ ಅವಶ್ಯಕವಾಗಿದ್ದು, ಚುನಾವಣಾ ಆಯೋಗವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಪ್ರಸಕ್ತ ಸಾಲಿನಲ್ಲಿ ಮತದಾರರ ಪಟ್ಟಿಗೆ ಆಧಾರ್ ಲಿಂಕ್ ಜೋಡಣೆ ಮಾಡುವುದರ ಮೂಲಕ ಬರುವ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯು ಪಾರದರ್ಶಕವಾಗಿ ನಡೆಯಲು ಅವಕಾಶ ಕಲ್ಪಿಸಬೇಕಾಗಿ ಅವರು ಮನವಿ ಮಾಡಿದ್ದಾರೆ.
Comments