ಬಿಜೆಪಿಯ ಕುತಂತ್ರಗಳಿಗೆ ಕಡಿವಾಣ ಹಾಕಲು ಜೆಡಿಎಸ್‌ನಿಂದ ಮಾತ್ರ ಸಾಧ್ಯ : ಎಚ್ ಡಿಕೆ

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಅನಧಿಕೃತ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದು, ಜನತೆ ಆತಂಕದಲ್ಲಿ ಬದುಕುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಅಲ್ಪಸಂಖ್ಯಾತರ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ದೇಶ ಕವಲು ದಾರಿಯಲ್ಲಿದ್ದು, ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ವಿರೋಧಿಗಳನ್ನು ಹಣಿಯುವ ಕೆಲಸ ಮಾಡುತ್ತಿದೆ ಎಂದರು. 'ದೇಶದ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುವಲ್ಲಿ ಕಾಂಗ್ರೆಸ್ ವಿಫಲವಾಗಿದ್ದು, ಇದಕ್ಕೆ ಗುಜರಾತ್‌ನಲ್ಲಿ ಗೋದ್ರಾ ಘಟನೆ ನಡೆದು 23 ವರ್ಷ ಕಳೆದರೂ ಇದುವರೆಗೂ ಅಲ್ಲಿ ಕಾಂಗ್ರೆಸ್ ರಾಜಕೀಯ ನೆಲೆ ಕಂಡುಕೊಳ್ಳಲು ಸಾಧ್ಯವಾಗಿಲ್ಲದಿರುವುದೇ ನಿದರ್ಶನ.ಅಲ್ಲದೆ ಬಾಬಾಬುಡಾನ್‌ಗಿರಿಯ ದತ್ತ ಪೀಠದ ಹೆಸರಿನಲ್ಲಿ ಒಂದು ಸಮುದಾಯದ ಅಪಾರ ನಂಬಿಕೆಗೆ ಒಳಗಾಗಿದ್ದ ಗೋರಿಗಳ ಮೇಲೆ ಅಕ್ರಮಣ ಮಾಡಿ,ಕೆಟ್ಟದಾಗಿ ನಡೆದುಕೊಳ್ಳುತಿದ್ದರೂ ಸರಕಾರ ಮೌನಕ್ಕೆ ಶರಣಾಗಿದೆ' ಎಂದು ಅವರು ಹೇಳಿದರು.
ಇದೇ ವಿಚಾರವಾಗಿ ನಾನು ಮುಖ್ಯಮಂತ್ರಿಯಾಗಿದ್ದಾಗ ಅಂದಿನ ಬಿಜೆಪಿ ರಾಜ್ಯಾಧ್ಯಕ್ಷರನ್ನು ಬಂಧಿಸಿ,ಜೈಲಿಗೆ ಕಳುಹಿಸಿದ್ದೇ. ಈ ರೀತಿ ದಿಟ್ಟತನವನ್ನು ಪ್ರದರ್ಶಿಸುವ ತಾಕತ್ತು ಕಾಂಗ್ರೆಸ್ ಪಕ್ಷಕ್ಕೆ ಇದೆಯೇ ಎಂದು ಪ್ರಶ್ನಿಸಿದ ಅವರು, ಬಿಜೆಪಿಯ ಕುತಂತ್ರಗಳಿಗೆ ಕಡಿವಾಣ ಹಾಕಲು ಜೆಡಿಎಸ್‌ನಿಂದ ಮಾತ್ರ ಸಾಧ್ಯವೆಂದರು. ಕಾಂಗ್ರೆಸ್ ರಾಜ್ಯದಲ್ಲಿ ಜೆಡಿಎಸ್ ವಿರುದ್ಧವಾಗಿ ಅಪಪ್ರಚಾರ ನಡೆಸುತ್ತಿದೆ. ಮುಸ್ಲಿಮರು ಜೆಡಿಎಸ್‌ಗೆ ಮತ ಹಾಕಿದರೆ, ಅದು ಪರೋಕ್ಷವಾಗಿ ಬಿಜೆಪಿ ಅಧಿಕಾರಕ್ಕೆ ಬರಲು ಬೆಂಬಲ ವ್ಯಕ್ತಪಡಿಸಿದಂತೆ ಎಂದು ಹೇಳುವ ಮೂಲಕ ಜನರಲ್ಲಿ ಭಯ ಹುಟ್ಟಿಸುತ್ತಿದೆ. 2006ರಲ್ಲಿ ನಾನು ಬಿಜೆಪಿಯೊಂದಿಗೆ ಕೈಜೋಡಿಸಲು ಕಾಂಗ್ರೆಸ್ ಕಾರಣ. ಈ ಬಗ್ಗೆ ಸಾರ್ವಜನಿಕ ಚರ್ಚೆಗೆ ಸದಾ ಸಿದ್ಧ ಎಂದು ಸವಾಲು ಹಾಕಿದರು.ಅಪನಂಬಿಕೆಯಿಂದ ಜೆಡಿಎಸ್‌ನಿಂದ ಅಲ್ಪಸಂಖ್ಯಾತರೂ ದೂರ ಹೋಗಬಾರದು. ಜೆಡಿಎಸ್ ಪಕ್ಷದ ಮೇಲೆ ನಂಬಿಕೆಯಿಡಬೇಕು ಎಂದು ಎಚ್ಡಿಕೆ ಮನವಿ ಮಾಡಿದರು.
Comments