ನನ್ನ ತಂದೆ ನಿರಪರಾಧಿಯಾಗಿ ಹೊರಬರುವ ವಿಶ್ವಾಸವಿದೆ : ಭಾವನಾ ಬೆಳೆಗೆರೆ

09 Dec 2017 5:32 PM | Politics
555 Report

ನಾನು ಈ ಬಗ್ಗೆ ಯಾವುದೇ ಹೆಚ್ಚಿನ ಪ್ರತಿಕ್ರಿಯೆ ನೀಡಲು ಇಚ್ಚೆ ಪಡುವುದಿಲ್ಲ. ನಾನು ಹಾಗೂ ನನ್ನ ಕುಟುಂಬವನ್ನು ಇದರಲ್ಲಿ ನುಸುಳಿಸುವುದು ತಪ್ಪು. ವಕೀಲರು ಯಾವುದೇ ಪ್ರತಿಕ್ರಿಯೆ ನೀಡಬಾರದು ಎಂದು ಸಲಹೆ ಮಾಡಿದ್ದಾರೆ. ಹೀಗಾಗಿ ನಾನು ಏನನ್ನೂ ಹೇಳಲಾರೆ.ಈ ಪ್ರಕರಣ ಕೇವಲ ಭೀಮಾ ತೀರದ ಹಂತಕ ಶಶಿಧರ ಮುಂಡೇವಾಡಿ ಅವರ ಒಂದು ಪೊಲೀಸ್ ಹೇಳಿಕೆ ಮೇಲೆ ನಿಂತಿದೆ. ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಭಾವನಾ ಬೆಳೆಗೆರೆ ಹೇಳಿದರು.

 ನಾನು ಕೂಡ ನಮ್ಮ ತಂದೆಯವರನ್ನು ಭೇಟಿಯಾಗಲು ಬೆಂಗಳೂರಿಗೆ ಹೋಗುತ್ತಿದ್ದೇನೆ. ಅವರನ್ನು ಭೇಟಿ ಮಾಡಿ ಚರ್ಚಿಸುತ್ತೇನೆ. ಅವರ ಆರೋಗ್ಯ ಕೂಡ ತುಂಬಾ ಹದಗೆಟ್ಟಿದೆ. ಪ್ರಕರಣ ಯಾವ್ಯಾವ ತಿರುವು ಪಡೆಯುತ್ತಿದೆ ಎಂಬುದು ನನಗೆ ಗೊತ್ತಿಲ್ಲ. ಆದರೆ ನಮ್ಮ ತಂದೆ ಅವರು ಔಷಧದ ಮೇಲೆ ಇದ್ದಾರೆ. ಅವರಿಗೆ ಯಾವುದೇ ತೊಂದರೆಯಾಗಬಾರದು ಎಂದು ಹೇಳಿದರು. ರವಿ ಬೆಳೆಗೆರೆ ಅವರು ದೊಡ್ಡ ವ್ಯಕ್ತಿ, ಒಬ್ಬ ಹೋರಾಟಗಾರ ಅವರು ಇದರಿಂದ ನಿರಪರಾಧಿಯಾಗಿ ಹೊರಬರುವ ವಿಶ್ವಾಸವಿದೆ. ಸುನೀಲ್​ ಹೆಗ್ಗರವಳ್ಳಿ ಅವರು ಈವರೆಗೆ ನನ್ನ ತಂದೆ ಮೇಲೆ ಕೊಲೆ ಸುಪಾರಿ ಕುರಿತಂತೆ ಲಿಖಿತ ದೂರು ನೀಡಿಲ್ಲ. ಕೇವಲ ಆರೋಪ ಮಾಡುತ್ತಿದ್ದಾರೆ. ಇದರಿಂದಾಗಿ ಇದೊಂದು ಸಣ್ಣ ಪ್ರಕರಣ. ಇದಕ್ಕಾಗಿಯೇ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ ವರೆಗೆ ಹೋಗುವ ಪ್ರಮೇಯ ಇಲ್ಲ. ನಮ್ಮ ತಂದೆ ಅವರು ಗಿಲ್ಟಿ ಅಲ್ಲ. ಕೇವಲ ಶಶಿ ಹೇಳಿಕೆ ಮೇಲೆ ಈ ಕೇಸ್​ ನಿಲ್ಲಲ್ಲ. ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಇದು ನ್ಯಾಯಾಲಯದಲ್ಲಿ ಕೂಡ ನಿಲ್ಲಲ್ಲ ಎಂದು ಸಮರ್ಥಿಸಿಕೊಂಡರು. ಇದೇ ವೇಳೆ ರವಿ ಬೆಳೆಗೆರೆ ಅವರ ಎರಡನೇ ಪತ್ನಿ ಯಶೋಮತಿ ಅವರಿಗೂ ನನಗೂ ಯಾವುದೇ ಸಂಬಂಧವಿಲ್ಲ. ಅವರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ. ಯಶೋಮತಿ ಅವರ ಜೊತೆಗೆ ಮಾತುಕತೆ ಮಾಡುವ ಪ್ರಶ್ನೇಯೇ ಇಲ್ಲ. ಈ ಬಗ್ಗೆ ಯಶೋಮತಿಯವರನ್ನೇ ಕೇಳಿ. ಅವರ ಫೇಸ್​ ಬುಕ್​ ಅಕೌಂಟ್​ ಬಗ್ಗೆ ಆಗಲಿ, ಅವರ ಜೊತೆಗೆ ನನಗೂ ಯಾವುದೇ ಸಂಪರ್ಕವಿಲ್ಲ ಎಂದು ಭಾವನಾ ಬೆಳೆಗೆರೆ ಸ್ಪಷ್ಟ ಪಡಿಸಿದರು.

Edited By

Shruthi G

Reported By

Madhu shree

Comments