ಹಳೇ ಮೈಸೂರಿನಲ್ಲಿ ಜೆಡಿಎಸ್ ಕಿಂಗ್
ರಾಜ್ಯ ರಾಜಕಾರಣದಲ್ಲಿ ಇತರ ಭಾಗಗಳ ತೂಕ ಒಂದಾದರೆ ಹಳೆ ಮೈಸೂರು ಭಾಗದ ತೂಕವೇ ಮತ್ತೊಂದು. ಈ ಪ್ರದೇಶದಲ್ಲಿ ದಶಕಗಳಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ ಜಿದ್ದಾಜಿದ್ದಿಯ ಹೋರಾಟ ನಡೆಯುತ್ತ ಬಂದಿದೆ. ಬಿಜೆಪಿ ರಾಜ್ಯದ ಇತರೆಡೆ ಪ್ರಾಬಲ್ಯ ಸಾಧಿಸಲು ಸಾಧ್ಯವಾದರೂ ಹಳೆ ಮೈಸೂರು ಪ್ರದೇಶದಲ್ಲಿ ಮಾತ್ರ ಭದ್ರವಾಗಿ ಬೇರೂರಲು ಸಫಲವಾಗಿಲ್ಲ.
ರಾಜಧಾನಿ ಬೆಂಗಳೂರು ಹಳೆ ಮೈಸೂರಿನ ವ್ಯಾಪ್ತಿಯಲ್ಲೇ ಇದ್ದರೂ ಚುನಾವಣಾ ದೃಷ್ಟಿಯಿಂದ ಪ್ರತ್ಯೇಕವಾಗಿಯೇ ನೋಡಬೇಕಾಗುತ್ತದೆ. ಬೆಂಗಳೂರಿಗೆ ರಾಜ್ಯದ ಎಲ್ಲ ಭಾಗಗಳಿಂದ ವಲಸೆ ಬಂದಿರುವುದರಿಂದ ಇದು ಹಳೆ ಮೈಸೂರು ಭಾಗದ ಸೊಗಡನ್ನು ಕಳೆದುಕೊಂಡಿದೆ ಎಂದೇ ಹೇಳಬಹುದು. ನವೆಂಬರ್'ನಲ್ಲಿ ನಡೆಸಿರುವ ಸಮೀಕ್ಷೆ ಅನುಸಾರ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ಜಯಭೇರಿ ಬಾರಿಸಲಿದೆ.ಕಳೆದ ಬಾರಿಯ ಚುನಾವಣೆಯಲ್ಲಿ ಈ ಪ್ರದೇಶದಲ್ಲಿ ಕಾಂಗ್ರೆಸ್ ಅತಿಹೆಚ್ಚು ಸ್ಥಾನ ಗಳಿಸಿತ್ತು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಈ ಭಾಗದ ಹಲವು ಜಿಲ್ಲೆಗಳಲ್ಲಿ ಬಲಾಢ್ಯವಾಗಿರುವ ಒಕ್ಕಲಿಗ ಸಮುದಾಯ ಜೆಡಿಎಸ್ ಬೆನ್ನಿಗೆ ನಿಲ್ಲುವ ಸಂಭವ ಕಂಡು ಬರುತ್ತಿದೆ.
ಸಮೀಕ್ಷೆ ಅನುಸಾರ ಈ ಬಾರಿ ಅದರ ಪ್ರಮಾಣ 20ಕ್ಕೆ ಕುಸಿಯಲಿದೆ. ಮತ ಗಳಿಕೆಯಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಅಗುವುದಿಲ್ಲವಾದರೂ ಸ್ಥಾನ ಗಳಿಕೆಯಲ್ಲಿ ಗಮನಾರ್ಹ ಇಳಿಕೆ ಕಂಡು ಬರಲಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಒಕ್ಕಲಿಗ ಸಮುದಾಯವನ್ನು ಕಡೆಗಣಿಸಿದೆ ಎಂಬ ಭಾವನೆ ಬಂದಿರಲಿಕ್ಕೂ ಸಾಕು. ಒಕ್ಕಲಿಗ ಸಮುದಾಯದ ಹಿತ ಕಾಪಾಡುವ ಪಕ್ಷ ಜೆಡಿಎಸ್ ಎಂಬ ನಿರೀಕ್ಷೆಯೂ ಕಾರಣವಾಗಿರಬಹುದು. ಕಳೆದ ಚುನಾವಣೆಯಲ್ಲಿ 25 ಸ್ಥಾನ ಗಳಿಸಿದ್ದ ಜೆಡಿಎಸ್ ಈ ಬಾರಿ 29 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಆದರೆ, ಮತ ಗಳಿಕೆಯಲ್ಲಿ ಹೆಚ್ಚಿನ ಏರಿಳಿತ ಆಗಲಿಕ್ಕಿಲ್ಲ ಎಂಬುದು ಸಮೀಕ್ಷೆಯಿಂದ ಹೊರಬಿದ್ದಿರುವ ಮಾಹಿತಿ. ಮೇಲಾಗಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇದೇ ಕೊನೆಯ ಚುನಾವಣೆ ಎನ್ನುತ್ತಲೇ ಪ್ರಚಾರದಲ್ಲಿ ತೊಡಗಿರುವುದರಿಂದ ಈ ಭಾಗದ ಜನರು ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಮನ್ನಣೆ ನೀಡುವ ಸಂಭವವಿದೆ.
Comments