ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿರುವ ರೈತರ ಸಾಲಮನ್ನಾ: ಎಚ್ ಡಿಕೆ

ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ರಾಜ್ಯ, ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿರುವ ರೈತರ ಸಾಲಮನ್ನಾ ಮಾಡಲಾಗುವುದು ಎಂದು ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಡಿ. 10ರಂದು ತುಮಕೂರಿನಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಸಮಾವೇಶ, 13ರಂದು ಬೆಂಗಳೂರಿನಲ್ಲಿ ಎಸ್ಸಿ, ಎಸ್ಟಿ ಸಮಾವೇಶ, ಜ.9ರಂದು ಮಂಗಳೂರಿನಲ್ಲಿ ಸಮಾವೇಶ ನಡೆಯಲಿದೆ ಎಂದು ಅವರು ಹೇಳಿದರು. ಬೇರೆ ಪಕ್ಷಗಳ ಟೀಕೆಗೆ ಸಮಾವೇಶದ ಸಮಯವನ್ನು ಬಳಸುವುದಿಲ್ಲ, ಸಾಚಾರ್ ಸಮಿತಿಯ ವರದಿಯ ಶಿಫಾರಸ್ಸು ಅನುಷ್ಠಾನಕ್ಕೆ ಗಮನ ನೀಡಲಾಗುವುದು. ಸಹಕಾರಿ ಸಂಘಗಳ ಸಾಲ ಮನ್ನಾ ಘೋಷಣೆ ಮಾಡಿದರೂ ರಾಜ್ಯದಲ್ಲಿ ರೈತರ ಸಮಸ್ಯೆಗಳು ದಿನೇ ದಿನೇ ಹೆಚ್ಚುತ್ತಿವೆ ಎಂದರು. ರಾಷ್ಟ್ರೀಯ, ಸಹಕಾರ ಗ್ರಾಮೀಣ ಬ್ಯಾಂಕುಗಳ ಸಾಲ ಮನ್ನಾ ಹಾಗು ಹೊಸ ಕೃಷಿ ಪದ್ಧತಿ ಅನುಷ್ಠಾನ ಮಾಡಲಾಗುವುದು. ತುಮಕೂರು ನಗರದಿಂದಲೆ ಚುನಾವಣಾ ಪ್ರಚಾರದ ಆರಂಭವಾಗಲಿದೆ. ಡಿ.15ಕ್ಕೆ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು. ತುಮಕೂರಿನ 11 ಕ್ಷೇತ್ರದ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುವುದು ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು. ಈ ಸಂದರ್ಭ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಬಿ.ಎಂ. ಫಾರೂಕ್, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಮೊಹಿನ್ ಅಲ್ತಾಫ್, ಜಿಲ್ಲಾಧ್ಯಕ್ಷ ಸಿ ಚೆನ್ನಿಗಪ್ಪ, ಶಾಸಕರಾದ ಎಸ್.ಆರ್. ಶ್ರೀನಿವಾಸ್, ಎಂ. ಟಿ. ಕೃಷ್ಣಪ್ಪ, ಸುರೇಶ್ ಬಾಬು ಹಾಗು ಇತರರು ಉಪಸ್ಥಿತರಿದ್ದರು.
Comments