ಮಾರ್ಚ್ 1ರಂದು ಕಾಂಗ್ರೆಸ್ ನಿಂದ ವಿಧಾನಸಭೆ ಚುನಾವಣೆಗೆ ಒಗ್ಗಟ್ಟಿನ ಯಾತ್ರೆ

ಯಾತ್ರೆಯ ಗೊಂದಲದಿಂದ ಹೊರ ಬರಲು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದು, ಮಾರ್ಚ್ 1ರಂದು ವಿಧಾನಸಭೆ ಚುನಾವಣೆಗೆ ಒಗ್ಗಟ್ಟಿನ ಯಾತ್ರೆ ಮಾಡಲು ಮುಂದಾಗಿದ್ದಾರೆ. ಡಿಸೆಂಬರ್‌ನಲ್ಲಿ ಇಬ್ಬರೂ ಮುಖಂಡರು ಪ್ರತ್ಯೇಕ ಜಿಲ್ಲಾ ಪ್ರವಾಸ ಕೈಗೊಳ್ಳುತ್ತಿದ್ದರೂ, ನಮ್ಮಿಬ್ಬರ ನಡುವೆ ಯಾವುದೇ ಗೊಂದಲವಿಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಅಧ್ಯಕ್ಷನಾಗಿ 7 ವರ್ಷದಲ್ಲಿ ಸಿಎಂ ಸಿದ್ದರಾಮಯ್ಯ ಜತೆ ಯಾವತ್ತೂ ಮುನಿಸಿಕೊಂಡಿಲ್ಲ. ಇಬ್ಬರ ನಡುವೆ ಯಾವತ್ತೂ ವೈಮನಸ್ಯ ಬಂದಿಲ್ಲ. ಆದರೂ ನಿರಂತರವಾಗಿ ಭಿನ್ನಾಭಿಪ್ರಾಯ ಎಂಬ ಮಾತುಗಳು ಕೇಳಿ ಬರುತ್ತಿವೆ. ಅದೆಲ್ಲ ಸತ್ಯಕ್ಕೆ ದೂರ ಎಂದು ಹೇಳಿದರು. ಕಳೆದ ಮೂರು ದಿನಗಳಿಂದ ಪಕ್ಷದ ಮುಂಚೂಣಿ ಘಟಕಗಳು ಮತ್ತು ಜಿಲ್ಲಾ ನಾಯಕರ ಸಭೆ ನಡೆಸಲಾಗಿದ್ದು, ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವ ಕುರಿತು ಸುದೀರ್ಘ ಚರ್ಚೆಯಾಗಿದೆ. ಮುಖ್ಯಮಂತ್ರಿ ಸರ್ಕಾರಿ ಪ್ರವಾಸ ಮಾಡುವ ಕ್ಷೇತ್ರಗಳನ್ನು ಹೊರತುಪಡಿಸಿ ಪಕ್ಷದ ವತಿಯಿಂದ ಕಾರ್ಯಾಧ್ಯಕ್ಷರ ಜೊತೆಗೂಡಿ ಪ್ರತ್ಯೇಕ ಪ್ರವಾಸ ಮಾಡಲು ತೀರ್ಮಾನಿಸಲಾಗಿದ್ದು, ಡಿ.20 ರಿಂದ ಆರಂಭವಾಗುವ ಸಾಧ್ಯತೆಯಿದೆ ಎಂದು ಹೇಳಿದರು.
Comments