ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಲಿಂಗಾಯತರ ಏಕತೆಯನ್ನು ಒಡೆದಿದೆ : ಎಚ್.ಡಿ.ಡಿ ಆಕ್ರೋಶ

'ಲಿಂಗಾಯತ ಸಮುದಾಯದ ಹಲವರು ಮುಖ್ಯಮಂತ್ರಿಗಳಾಗಿದ್ದರು. ಆದರೆ, ಕಾಂಗ್ರೆಸ್ ಪಕ್ಷವು ಆ ಸಮುದಾಯವನ್ನು ಈಗ ನುಚ್ಚು ನೂರಾಗುವಂತೆ ಮಾಡಿದೆ, ಜಾತಿಗಳಲ್ಲಿ ಸಂಘರ್ಷ ಉಂಟು ಮಾಡುವುದರಿಂದ, ಹಣ ಬಲದಿಂದ ಅಧಿಕಾರವನ್ನು ಉಳಿಸಿಕೊಳ್ಳಬಹುದು ಎಂದುಕೊಂಡವರಿಗೆ ತಿಳಿವಳಿಕೆ ಇಲ್ಲ ಎಂದರ್ಥ' ಎಂದು ಎಚ್.ಡಿ.ಡಿ ಹೇಳಿದರು.
'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತಲೆಯ ಮೇಲೆ ಹೊತ್ತು ತಿರುಗಿದ್ದೆ. ಆದರೆ ಅವರು ಪಕ್ಷ ಬಿಟ್ಟರು. ನನ್ನೊಂದಿಗಿದ್ದು ಉಪ ಮುಖ್ಯಮಂತ್ರಿಯಾಗಿದ್ದಾಗಲೇ ಅವರು ಕಾಂಗ್ರೆಸ್ ಜೊತೆ ಕೈಜೋಡಿಸಿದ್ದರು. ತಾವು ಮತ್ತು ಎಂ.ಪಿ.ಪ್ರಕಾಶ್ ತೊರೆದರೆ ಜೆಡಿಎಸ್ ಉಳಿಯುವುದಿಲ್ಲ ಎಂದು ತಿಳಿದುಕೊಂಡಿದ್ದರು. ಈಗಲೂ ಅವರು ಜೆಡಿಎಸ್ ಅನ್ನು ಮುಗಿಸುವ ಮಾತನಾಡುತ್ತಿದ್ದಾರೆ' ಎಂದು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಗಣೇಶ ಬೀಡಿ ಮಾರ್ಕೆಟಿಂಗ್ ಅಲ್ಲ: 'ಸಿದ್ದರಾಮಯ್ಯ, ಹನ್ನೆರಡು ಮಂದಿ ರಾಜಕೀಯ ಕಾರ್ಯದರ್ಶಿಗಳನ್ನು ನೇಮಿಸಿಕೊಳ್ಳುವ ಅಗತ್ಯವೇನಿದೆ? 120 ನಿಗಮ ಮಂಡಳಿಗಳೂ ಬೊಕ್ಕಸಕ್ಕೆ ಹೊರೆಯಾಗಿವೆ. ಅಧಿಕಾರವನ್ನು ಕಳೆದುಕೊಳ್ಳುವ ಭಯವಿರುವ ಅವರು ಪತ್ರಿಕೆಗಳಿಗೆ ಪುಟಗಟ್ಟಲೆ ಜಾಹೀರಾತು ಕೊಡುತ್ತಿದ್ದಾರೆ. ಟಿ.ವಿ.ಗಳಲ್ಲಿ ಹಲವು ಭಾಷೆಗಳಲ್ಲಿ ಜಾಹೀರಾತು ಪ್ರಸಾರವಾಗುತ್ತಿವೆ. ಅದೆಲ್ಲವೂ ಜನರ ತೆರಿಗೆ ಹಣ. ರಾಜಕಾರಣ ಎಂದರೆ ಗಣೇಶ ಬೀಡಿ ಮಾರ್ಕೆಟಿಂಗ್ ಕೆಲಸ ಅಲ್ಲ' ಎಂದು ದೇವೇಗೌಡರು ಕುಟುಕಿದರು.
ಪರಿಶಿಷ್ಟರ ಅಂತ್ಯಸಂಸ್ಕಾರ ಎಲ್ಲಿ?: 'ಉಡುಪಿಯಲ್ಲಿ ನಡೆದ ಧರ್ಮ ಸಂಸತ್ನಲ್ಲಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥರು, ಎಲ್ಲ ಹಿಂದೂಗಳ ಅಂತ್ಯ ಸಂಸ್ಕಾರ ಒಂದೇ ಕಡೆ ನಡೆಯಲಿ ಎಂದು ಹೇಳಿದ್ದಾರೆ. ಹಾಗಾದರೆ ಬ್ರಾಹ್ಮಣರ ಸ್ಮಶಾನಗಳಲ್ಲಿ ಪರಿಶಿಷ್ಟರ ಅಂತ್ಯಸಂಸ್ಕಾರ ಸಾಧ್ಯವಾಗುತ್ತದೆಯೇ?' ಎಂದು ದೇವೇಗೌಡ ಕೇಳಿದರು.
Comments