ನಾನು ಭಿಕ್ಷೆ ಬೇಡುತ್ತಿಲ್ಲ, ಕರ್ತವ್ಯ ನಿರ್ವಹಿಸುತ್ತಿದ್ದೇನಷ್ಟೇ : ಉಪೇಂದ್ರ
ನಾನಿಲ್ಲಿ ಯಾರಲ್ಲೂ ಭಿಕ್ಷೆ ಬೇಡುತ್ತಿಲ್ಲ. ಬದಲಾಗಿ ಪ್ರಜೆಯಾಗಿ ನನ್ನ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಹೆಸರು ಮಾಡಲು, ದುಡ್ಡು ಮಾಡಲು ಬಂದಿಲ್ಲ. ನನ್ನ ಸಿನಿಮಾ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದೇನೆ. ಸತ್ತ ಮೇಲೆ ಇತಿಹಾಸ ಪುಸ್ತಕದಲ್ಲಿ ಹೆಸರು ಇರಬೇಕು ಎಂಬ ಮೂರ್ಖತನವೂ ಇಲ್ಲ ಎಂದು ಹೇಳುತ್ತಾ ಉಪೇಂದ್ರ ಪ್ರಜಾಕೀಯದ ಬಗ್ಗೆ ಮಾತನಾಡಿದರು.
ಪ್ರಜಾಕೀಯ ಆರಂಭಿಸಲು ಯಾವ ರಾಜಕಾರಣಿ ತಮಗೆ ಮಾಡೆಲ್ ಎಂದು ಪ್ರಶ್ನಿಸಿದಾಗ, ನನಗೆ ಸಂವಿಧಾನವೇ ಮಾಡೆಲ್. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಆಶಯದಂತೆ ಯಾರು ಕೂಡಾ ಜನರ ಪ್ರತಿನಿಧಿಗಳಾಗಬಹುದು. ಅದಕ್ಕೆ ವಿದ್ಯಾರ್ಹತೆ, ವಯಸ್ಸಿನ ಪರಿಮಿತಿ, ಜ್ಞಾನದ ಪರಿಮಿತಿಯನ್ನು ವಿಧಿಸಲಾಗಿಲ್ಲ. ಪ್ರಜೆಗಳ ಜವಾಬ್ದಾರಿಯೇ ಇಲ್ಲಿ ಪ್ರಮುಖ ಎಂದವರು ಹೇಳಿದರು. ಪ್ರಜಾಪ್ರಭುತ್ವದ ಮೂಲಸ್ಥಿತಿಗೆ ಹೋಗಬೇಕು. ಈಗಿರುವುದು ಸರಿಯಲ್ಲ. ಶೇ.80 ಜನ ಸುಮ್ಮನಿದ್ದಾರೆ. ಶೇ.20 ಜನ ಗಲಾಟೆ ಮಾತನಾಡುತ್ತಿದ್ದಾರೆ. ಆ ಶೇ.20 ಜನರನ್ನು ಬಿಟ್ಟು, ಶೇ.80 ಜನರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದೇನೆ. ನನಗೆ 224 ಮಂದಿ ಸಿಎಂಗಳಂತೆ ಅಂದರೆ ಕೆಲಸ ಮಾಡುವ ಅಭ್ಯರ್ಥಿಗಳು ಮತ್ತು ಮತದಾರರು ಬೇಕು. ಸಪೋರ್ಟ್ ಮಾಡುವುದು ಅಂದರೆ ವೋಟ್ ಹಾಕಬೇಕು. ನಾನು ಹೇಳುವುದು ಸತ್ಯ ಎಂದಾದರೆ, ನೀವು ಬೇರೆಯವರಿಗೆ ಹೇಳಿಬಿಡಿ ಎಂದವರು ಕರೆ ನೀಡಿದರು.
ಕೇಂದ್ರ ಸರಕಾರದ ನೋಟು ಅಮಾನ್ಯೀಕರಣದ ಕುರಿತು ಪ್ರತಿಕ್ರಿಯಿಸಿದ ನಟ ಉಪೇಂದ್ರ, ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆ ಉತ್ತಮವಾದದ್ದೇ. ಅವರು ಒಳ್ಳೆಯದನ್ನು ಮಾಡಲು ಹೊರಟಿದ್ದಾರೆ. ಅಸಂಘಟಿತ ಕ್ಷೇತ್ರದಿಂದ ಸಂಘಟಿತ ಕ್ಷೇತ್ರಗಳನ್ನು ಮಾಡಲು ಹೊರಟಿದ್ದಾರೆ. ನೋಟು ಅಮಾನ್ಯೀಕರಣ, ಜಿಎಸ್‌ಟಿ ಎಲ್ಲವೂ ಒಳ್ಳೆಯದೇ. ಆದರೆ, ಅದರ ಮಧ್ಯೆ ಅಂತರ ಇಟ್ಟಿದ್ದರೆ ಚೆನ್ನಾಗಿರುತ್ತಿತ್ತು. ನೋಟು ಅಮಾನ್ಯೀಕರಣದಿಂದ 1,000 ರೂ. ನೋಟು ಹೋಯಿತು. ಆದರೆ 2,000 ರೂ. ನೋಟು ಬಂತು. ಇದರಿಂದಾಗಿ ಎರಡು ಬೀರುಗಳಲ್ಲಿ ಹಣ ತುಂಬಿಸುತ್ತಿದ್ದವರಿಗೆ ಒಂದು ಬೀರುವಿಲ್ಲಿಡಲು ಅವಕಾಶ ಕಲ್ಪಿಸಿದಂತಾಯಿತು. ಫುಲ್ ಡಿಜಿಟಲ್ ಆಗಿದ್ದರೆ ಯಾರಿಗೂ ಕಳ್ಳತನ ಮಾಡಲು ಆಗುವುದಿಲ್ಲ ಎಂಬ ವಿಶ್ವಾಸ ಬರುತ್ತಿತ್ತು ಎಂದರು.
Comments