ಬಳ್ಳಾರಿಯಲ್ಲಿಂದು ಪಕ್ಷದ ಬಲವರ್ಧನೆಗೆ ನಾಂದಿ ಹಾಡಲು ಮುಂದಾದ ದೇವೇಗೌಡರು

ಬರುವ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಾಂತ ಪ್ರವಾಸ ಆರಂಭಿಸಿರುವ ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ ಇಂದು ನಗರದ ಕಮ್ಮ ಭವನದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಬೆಳಗ್ಗೆ ಹಂಪಿ ಎಕ್ಸ್‌ಪ್ರೆಸ್ ಮೂಲಕ ಬಳ್ಳಾರಿಗೆ ಆಗಮಿಸಿದ ಅವರನ್ನು ಪಕ್ಷದ ಕಾರ್ಯಕರ್ತರು ರೈಲ್ವೆ ನಿಲ್ದಾಣದಲ್ಲಿ ಘೋಷಣೆ ಕೂಗುತ್ತ, ಜೈ ಕಾರ ಹಾಕಿ ಭರ್ಜರಿ ಸ್ವಾಗತ ಮಾಡಿದರು.ಎಂ.ಪಿ. ಪ್ರಕಾಶ್ ಅವರು ಜೆಡಿಎಸ್ ತೊರೆದ ಮೇಲೆ ಪಕ್ಷದ ಸಂಘಟನೆ ಜಿಲ್ಲೆಯಲ್ಲಿ ಅಷ್ಟಕ್ಕಷ್ಟೇ. ಈ ಕಾರಣದಿಂದ ಈ ಬಾರಿ ಜಿಲ್ಲೆಯಲ್ಲಿ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡಿರುವ ಗೌಡರ ಕುಟುಂಬ ಇಂದಿನ ಸಭೆ ಪಕ್ಷದ ಬಲವರ್ಧನೆಗೆ ನಾಂದಿ ಹಾಡಲಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಸ್ವತಃ ದೇವೇಗೌಡರು ಕಾಂಗ್ರೆಸ್ ಮತ್ತು ಬಿಜೆಪಿಯ ಕೆಲ ಪ್ರಮುಖ ಮುಖಂಡರಿಗೆ ಗಾಳ ಹಾಕಿದ್ದು ಮಾತುಕತೆ ನಡೆಸಿದ್ದಾರಂತೆ. ಇದನ್ನು ಹೊಸಪೇಟೆ ಮಾಜಿ ಶಾಸಕ ಕಾಂಗ್ರೆಸ್ ಮುಖಂಡ ಹೆಚ್.ಆರ್. ಗವಿಯಪ್ಪ ಒಪ್ಪಿಕೊಂಡಿದ್ದಾರೆ.ಗೌಡರು ಫೋನ್ ಮಾಡಿದ್ದರು. ಕುಟುಂಬದವರೊಡನೆ ಮಾತನಾಡಿ ತಮ್ಮ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಪಕ್ಷದ ಮುಖಂಡರಾದ ಪಿ.ಜಿ.ಆರ್. ಸಿಂಧ್ಯಾ ಸೇರಿದಂತೆ ಮೊದಲಾದವರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
Comments