ರಾಜ್ಯದಲ್ಲಿ ಜೆಡಿಎಸ್ ಎಲ್ಲಿದೆ ಸತ್ತು ಹೋಯ್ತು ಎಂಬ ಸಿಎಂ ಹೇಳಿಕೆಗೆ ದೊಡ್ಡಗೌಡರ ತಿರುಗೇಟು

ಈ ಪಾರ್ಟಿ ದೇವೇಗೌಡರ ಕುಟುಂಬದ ಆಸ್ತಿಯಲ್ಲ . ಪಕ್ಷದ ಕಟ್ಟಡ ಹೋದಾಗ ಒಂಟಿಯಾಗಿ ಕುಳಿತು ಕಣ್ಣೀರಾಕಿದ್ದೇನೆ. ಈ ಪಕ್ಷ ಅಧಿಕಾರಕ್ಕೆ ತರಬೇಕೆಂಬ ಹೆಬ್ಬಯಕೆಯಿದೆ. ನನ್ನ ಮಗನನ್ನು ಸಿಎಂ ಮಾಡಬೇಕಂಬ ಆಸೆಯಲ್ಲ. ರೈತರ ಕಣ್ಣೀರು ಒರೆಸುವ ಆಸೆಯಿದೆ. ನಮ್ಮ ಪಕ್ಷದ ಬಗ್ಗೆ ಅಪಹಾಸ್ಯ ಮಾಡುತ್ತಾರೆ. ರಾಜ್ಯದಲ್ಲಿ ಜೆಡಿಎಸ್ ಎಲ್ಲಿದೆ ಸತ್ತು ಹೋಯ್ತು ಅಂತ ಮುಖ್ಯಮಂತ್ರಿ ಹೇಳುತ್ತಾರೆ. ಅವರು ಬಂದು ನೋಡಲಿ ಕೊರಟಗೆರೆಯಲ್ಲಿ ಈ ರೀತಿ ಸಭೆ ನಡೆದಿದ್ದು ನಾನು ನೋಡಿಲ್ಲ ಎಂದು ಗೌಡರು ತಿರುಗೇಟು ನೀಡಿದ್ದಾರೆ.
ಕೆಪಿಸಿಸಿ ರಾಜ್ಯಾಧ್ಯಕ್ಷರು ಸೊಂಟ ಮುರಿದಿಲ್ಲ ಎಂದು ಹೇಳಿದರು. ದೇವೇಗೌಡರ ಸೊಂಟ ಸರಿಯಿದೆ ಎಂದು ತೋರಿಸಲು ಎರಡು ಗಂಟೆಗಳ ಕಾಲ ರ‍್ಯಾಲಿಯಲ್ಲಿ ನಿಂತು ಕೊಂಡು ಬಂದೆ. ಕೆಪಿಸಿಸಿ ಅಧ್ಯಕ್ಷರಿಗೆ ದೊಡ್ಡಗೌಡರು ಟಾಂಗ್ ನೀಡಿದರು.
ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಒಂದು ಪ್ರಾದೇಶಿಕ ಪಕ್ಷ ಉಳಿಯಬೇಕೆ ಬೇಡವೇ ಎಂಬ ನಿರ್ಧಾರ ಮಾಡುವವರು ಜನಗಳು. ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಮೂಲೆ ಗುಂಪು ಮಾಡಿದರು ಎಂದು ಕೊರಟಗೆರೆಯಲ್ಲಿ 'ಮನೆ ಮನೆಗೆ ಕುಮಾರಣ್ಣ' ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಹೇಳಿದ್ದಾರೆ.ಕಷ್ಟ ಬಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಗೆ ಬಂದರು. ನೀವು ಬರದಿದ್ದರೆ ನನಗೆ ಕಷ್ಟವಾಗುತ್ತದೆ. ಮನೆಗೆ ಬಂದು ಸಹಕಾರ ಬೇಕು ಎಂದು ಮನವಿ ಮಾಡಿಕೊಂಡರು. ನಾನು ವಿಧಾನಸೌಧಕ್ಕೆ ಬಂದು 20 ವರ್ಷವಾಗಿತ್ತು. ಜನರ ಕಷ್ಟಕ್ಕಾಗಿ ನಾನು ಹೋದೆ ಎಂದು ದೇವೇಗೌಡರು ಹೇಳಿದ್ದಾರೆ.
ಜಾತಿ ಎಲ್ಲವನ್ನು ಬಿಟ್ಟು ಕುಮಾರ ಸ್ವಾಮಿಗೆ ಅಧಿಕಾರ ಕೊಡಿ. ಬಿಜೆಪಿಗೆ ಐದು ವರ್ಷ, ಕಾಂಗ್ರೆಸ್'ಗೆ ಐದು ವರ್ಷ ಅಧಿಕಾರ ನೀಡಿದ್ದೇವೆ. ಈ ಬಾರಿ ನಿಮಗೆ ಅಧಿಕಾರ ನೀಡುತ್ತೇವೆ ಎಂದು ಜನರು ಹೇಳಿದ್ದಾರೆ. ಕುಮಾರಸ್ವಾಮಿಗೆ ಎರಡು ಬಾರಿ ಆಪರೇಷನ್ ಆಗಿದೆ. ದೇವರ ಕೃಷೆಯಿಂದ ನಿಮ್ಮ ಮುಂದೆ ನಿಲ್ಲುವಂತಾಗಿದೆ. ರಾಜ್ಯದ ಹಿತವನ್ನು ಕಾಪಾಡಲು ನಾನು ರಾಜ್ಯಾದ್ಯಂತ ಓಡಾಡುತ್ತಿದ್ದೇನೆ. ದಯವಿಟ್ಟು ಯುವಕರು ಕುಮಾರಣ್ಣ ಬಂದಾಗ ಪಟಾಕಿ ಹೊಡೆಯಬೇಡಿ ಅವರಿಗೆ ಆರೋಗ್ಯ ಸರಿಯಿಲ್ಲ ಎಂದು ಕಾರ್ಯಕರ್ತರಲ್ಲಿ ದೇವೇಗೌಡರು ಮನವಿ ಮಾಡಿದರು.
Comments