ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದೇವೆ: ಪ್ರಜ್ವಲ್ ರೇವಣ್ಣ

ತಳಮಟ್ಟದಿಂದ ಪಕ್ಷ ಸಂಘಟನೆ ಸಾಮರ್ಥ್ಯ ಮನಗಂಡು ವರಿಷ್ಠರು ನೀಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಲಾಗುವುದೆಂದ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್ ರೇವಣ್ಣ, ಮುಂಬರುವ ಚುನಾವಣೆಯಲ್ಲಿ 113ಕ್ಕೂ ಮೇಲ್ಪಟ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಜೆಡಿಎಸ್ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದರು.
ಸಿಂಧನೂರು ಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭೇಟಿಯಾದ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಪಕ್ಷ ಸಂಘಟನೆ ತಮ್ಮ ಸಾಮರ್ಥ್ಯ ಮನಗಂಡು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ವಹಿಸಿದ್ದಾರೆ. 2018ರ ವಿಧಾನಸಭಾ ಚುನಾವಣಾ ಕಣಕ್ಕಿಳಿಯಲು ಆಸಕ್ತಿ ಹೊಂದಲಾಗಿದ್ದು, ವರಿಷ್ಠರಾದ ಬಂಡೆಪ್ಪ ಕಾಶೆಂಪುರ ನೇತೃತ್ವದ ಸಮಿತಿ ಟಿಕೆಟ್ ನೀಡುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದೆ. ರಾಜ್ಯ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಗೆ ದಿನಗಣನೆ ಹಿನ್ನೆಲೆ ಪಕ್ಷ ಸಂಘಟನೆಗೆ ಪ್ರಥಮ ಆದ್ಯತೆ ನೀಡಲಾಗಿದೆ. ಕಾಂಗ್ರೆಸ್ ಪಕ್ಷದಲ್ಲಿರುವ ಬಹುತೇಕ ಸಚಿವರು ಜೆಡಿಎಸ್ ಪಕ್ಷದಿಂದ ಹೋದವರಾಗಿದ್ದು, 7 ಶಾಸಕರು ಪಕ್ಷ ಬಿಟ್ಟು ಹೋದ ಮಾತ್ರಕ್ಕೆ ಜೆಡಿಎಸ್ ಶಕ್ತಿ ಕುಗ್ಗಿಲ್ಲ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ 113 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರುವ ಮೂಲಕ ಜೆಡಿಎಸ್ ರಾಜ್ಯದಲ್ಲಿ ಅಧಿಕಾರ ಗದ್ದುಗೆಗೇರಲಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಯಲ್ಲಿ ಯುವಕರಿಗೆ ಸೂಕ್ತ ಸ್ಥಾನಮಾನ ದೊರೆತಿಲ್ಲ. ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಯುವಕರಿಗೆ ಸೂಕ್ತ ಸ್ಥಾನಮಾನ ನೀಡಲಾಗುವುದೆಂದರು. ಮುಖಂಡರಾದ ಸುಮಿತ್ ತಡಕಲ್ ಇನ್ನಿತರರು ಉಪಸ್ಥಿತರಿದ್ದರು.
Comments