ಸದ್ದಿಲ್ಲದೇ ಗ್ರಾಮ ವಾಸ್ತವ್ಯಕ್ಕೆ ಮುಂದಾದ ನಟ ಉಪೇಂದ್ರ
ಗ್ರಾಮೀಣ ಭಾಗದ ಜನರನ್ನು ಸೆಳೆಯುವ ಉದ್ದೇಶದಿಂದ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಸದ್ದಿಲ್ಲದೇ ಗ್ರಾಮೀಣ ಭಾಗಗಳಲ್ಲಿ ವಾಸ್ತವ್ಯ ಹೂಡಿ ರೈತರ ಸಭೆಗಳನ್ನು ನಡೆಸಲು ಮುಂದಾಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಅಗತಗೌಡನಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಉಪ್ಪಿ, ಬೆಳಗ್ಗೆ ಗ್ರಾಮಸ್ಥರ ಜೊತೆ ಹಾಗೂ ರೈತರೊಂದಿಗೆ ಸಭೆ ನಡೆಸಿ, ರೈತರಿಗೆ ಎದುರಾಗಿರುವ ಸವಾಲುಗಳ ಬಗ್ಗೆ ಚರ್ಚೆ ನಡೆಸಿದ್ರು.
ಇದೇ ವೇಳೆ ಮಾತನಾಡಿದ ಉಪೇಂದ್ರ, ಚಾಮರಾಜನಗರ ಭದ್ರಕೋಟೆ ಎಂದು ನಾನು ಇಲ್ಲಿಗೆ ಬಂದಿಲ್ಲ. ಇಲ್ಲಿನ ಜನರ ಸಮಸ್ಯೆ ತಿಳಿಯಲು, ಗ್ರೌಂಡ್ ರಿಯಾಲಿಟಿ ಚೆಕ್ ಮಾಡಲು ಬಂದಿದ್ದೇನೆ. ಇಲ್ಲಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿ ಅದಕ್ಕೆ ಪರಿಹಾರವನ್ನು ಪಟ್ಟಿ ಮಾಡಲು ಇಲ್ಲಿನ ಜನರಿಗೆ ಹೇಳಿದ್ದೇನೆ ಎಂದ್ರು. ಈ ಭಾಗದಲ್ಲಿ ಯಾವ ಪಕ್ಷ ಇದೆ, ಇಲ್ಲಿ ಯಾರು ಅಭ್ಯರ್ಥಿ ಎಂಬುದು ನನಗೆ ಗೊತ್ತಿಲ್ಲ. ಅದನ್ನು ತಿಳಿದುಕೊಳ್ಳೋದಕ್ಕೆ ನಾನು ಇಲ್ಲಿ ಬಂದಿಲ್ಲ. ನನ್ನ ನಾಲ್ಕೈದು ಟೀಂಗಳು ಗ್ರೌಂಡ್ ರಿಯಾಲಿಟಿ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ಅಂದ್ರೆ ಕೃಷಿ, ಆರೋಗ್ಯ, ಕೆರೆ ಮುಂತಾದವುಗಳ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ. ಹೀಗಾಗಿ ನಾನು ಬಂದು ಅದರ ರಿಯಾಲಿಟಿ ನೋಡ್ತಾ ಇದ್ದೀನಿ. ಇಲ್ಲಿನ ಕೆರೆಗಳು ಹೇಗಿವೆ, ಅವುಗಳನ್ನು ಹೇಗೆ ಸರಿಪಡಿಸಬಹುದು, ಜನರು ಅದಕ್ಕೆ ಯಾವ ರೀತಿ ಸ್ಪಂದಿಸುತ್ತಾರೆ ಎಂಬುವುದರ ಬಗ್ಗೆ ನೋಡಲು ಬಂದಿದ್ದೇನೆ. ಯಾವುದೇ ಬೇರೆ ಉದ್ದೇಶ ನನಗಿಲ್ಲ ಅಂತ ಹೇಳಿದ್ರು.
Comments